ತಂಜಾವೂರು ವಾಸ್ತುಶೈಲಿಯ ಕಾರ್ಮಾರು ಕ್ಷೇತ್ರದ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾರ್ಚ್ 1ರಿಂದ
ಮಾನ್ಯ: ಇಲ್ಲಿಗೆ ಸಮೀಪದ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 32 ವರ್ಷಗಳ ಬಳಿಕ ನೂತನ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ ಹಾಗೂ ರಾಜಗೋಪುರ ನವೀಕರಣ ಗೊಂಡಿದ್ದು, ಮಾರ್ಚ್ 1ರಿಂದ 9ರ ವರೆಗೆ ನಡೆಯುವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ತಂಜಾವೂರು ವಾಸ್ತುಶೈಲಿಯ ಆಳೆತ್ತರದ ಮಹಾವಿಷ್ಣುಮೂರ್ತಿ ಇಲ್ಲಿ ಕಂಗೊಳಿಸುತ್ತಿದೆ ಎಂದು ಬ್ರಹ್ಮಕಲ ಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ನಿನ್ನೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾರ್ಚ್ ೧ರಂದು ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬಳಿಕ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಧಾರ್ಮಿಕ ಸಭೆಯನ್ನು ಕೆ.ಕೆ. ಶೆಟ್ಟಿ ಉದ್ಘಾಟಿಸುವರು. ವಿವಿಧ ದಿನಗಳಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಸ್ವಾಮೀಜಿ, ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಸಾದ್ವಿ ಶ್ರೀ ಮಾತಾನಂದ ಮಯಿ, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕಟೀಲು ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಸಹಿತ ಹಲವು ಗಣ್ಯರು ಭಾಗವಹಿಸುವರು.
ಸಂಗೀತ, ನೃತ್ಯ, ಯಕ್ಷಗಾನ ಮೊದಲಾದ ಕಲೆಗಳು ಪ್ರದರ್ಶನಗೊಳ್ಳಲಿವೆ. ಪ್ರತೀ ದಿನ ಬೆಳಿಗ್ಗೆಯಿಂದ ರಾತ್ರಿ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಮೈಸೂರು ಅರಮನೆಯ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಸೇವಾ ಸಮಿತಿ ಅಧ್ಯಕ್ಷ ಪಿ.ಜಿ. ಶ್ರೀಕೃಷ್ಣ ಭಟ್ ಪುದುಕೋಳಿ, ಟ್ರಸ್ಟಿಗಳಾದ ಗೋಪಾಲಕೃಷ್ಣ ಭಟ್ ಪಿ.ಎಸ್, ರಾಮ ಕಾರ್ಮಾರು, ಸೇವಾ ಸಮಿತಿ ಕೋಶಾಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರಂಜಿತ್ ಯಾದವ್ ಎ.ಎಸ್, ಯುವ ಸಮಿತಿ ಸಂಚಾಲಕ ವಿಜಯ ಕುಮಾರ್ ಮಾನ್ಯ, ಪಂ. ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಮಾನ ಮಾಸ್ತರ್ ಮಾನ್ಯ ಉಪಸ್ಥಿತರಿದ್ದರು.