ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ: ೧೦ನೇ ತರಗತಿ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲು: ಯುವಕನ ವಿರುದ್ಧ ಪೋಕ್ಸೋ ಕೇಸು
ಬದಿಯಡ್ಕ: ತಂದೆಯನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಬಾಲಕಿಯ ಹೇಳಿಕೆ ಪ್ರಕಾರ ಮೊಗ್ರಾಲ್ ನಿವಾಸಿಯಾದ ಗಲ್ಫ್ ಉದ್ಯೋಗಿ ವಿರುದ್ದ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ. ಆರೋಪಿಗಾಗಿ ತೀವ್ರಶೋಧ ನಡೆಸಲಾಗುತ್ತಿದೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಹದಿನಾರರ ಹರೆಯದ ಬಾಲಕಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.
ಮೊನ್ನೆ ಸಂಜೆ ಶಾಲೆಯಿಂದ ಮನೆಗೆ ಮರಳಿ ತಲುಪಿದ ಬಳಿಕ ಬಾಲಕಿ ವಿಷ ಸೇವಿಸಿದ್ದಾಳೆಂದು ಹೇಳಲಾಗುತ್ತಿದೆ. ಮೊಗ್ರಾಲ್ ನಿವಾಸಿಯಾದ ಯುವಕನನ್ನು ಬಾಲಕಿ ಸಾಮಾಜಿಕ ತಾಣದ ಮೂಲಕ ಪರಿಚಯಗೊಂಡಿದ್ದಳೆನ್ನಲಾಗುತ್ತಿದೆ. ಈ ವಿಷಯ ಮನೆಯವರಿಗೆ ತಿಳಿದ ಹಿನ್ನೆಲೆ ಯಲ್ಲಿ ಮನೆಯವರು ಬಾಲಕಿಗೆ ಬುದ್ದಿಮಾತು ಹೇಳಿದ್ದರು. ಇದರಿಂದ ಯುವಕನೊಂದಿಗಿನ ಸ್ನೇಹವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದು, ಫೋನ್ ನಂಬ್ರವನ್ನು ಬ್ಲೋಕ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವಕ ಬಾಲಕಿ ಶಾಲೆಗೆ ತೆರಳುತ್ತಿದ್ದಾಗ ಹಿಂಬಾಲಿಸಿದ್ದು, ಅಲ್ಲದೆ ತಂದೆಯನ್ನು ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿರುವುದಾಗಿ ಬಾಲಕಿ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗಷ್ಟೇ ಯುವಕ ಗಲ್ಫ್‌ನಿಂದ ಊರಿಗೆ ಬಂದಿದ್ದನು. ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದ ಯುವಕ ಊರಿನಿಂದ ಪರಾರಿಯಾಗಿದ್ದಾನೆಂದು ಪೊಲೀಸರಿಗೆ ಮಾಹಿತಿ ಲಭಿಸಿರುವುದಾಗಿ ಹೇಳಲಾಗುತ್ತಿದೆ.