ತ್ಯಾಜ್ಯ ನೀರು ಸಂಸ್ಕರಿಸಿ ಮರುಬಳಕೆ ಮಾದರಿ ಕಾರ್ಯ- ಶಾಸಕ ಎಕೆಎಂ ಅಶ್ರಫ್
ಮಂಜೇಶ್ವರ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 99ನೆಯ ಜನ್ಮ ದಿನದಂದು ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮ ದಲ್ಲಿ ನೂತನವಾಗಿ ನಿರ್ಮಿಸಿದ ತ್ಯಾಜ್ಯ ನೀರಿನ ಮರು ಬಳಕೆ ಸಂಸ್ಕರಣಾ ಘಟಕವನ್ನು ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಅವರು ಮಾತನಾಡಿ, ಇಲ್ಲಿ ನಡೆಯುತ್ತಿರುವ ನಿಸ್ವಾರ್ಥ ಸೇವಾ ಕಾರ್ಯಗಳು ಅತ್ಯಂತ ಪ್ರಶಂಸನೀಯ, ಇದಕ್ಕೆ ಶಾಸಕರ ನಿಧಿಯಿಂದ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.
ವರ್ಕಾಡಿಯ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ರೆ. ಫಾ| ಬಾಸಿಲ್ ವಾಸ್ ನಿರ್ಗತಿಕ ಹಾಗೂ ಮಾನಸಿಕ ರೋಗಿಗಳನ್ನು ಅತ್ಯಂತ ಪ್ರೀತಿ, ಕಾಳಜಿಯೊಂದಿಗೆ ಸಲಹುತ್ತಿ ರುವ ಈ ಆಶ್ರಮದೊಂದಿಗಿನ ತನ್ನ ನಿಕಟ ಸಂಬAಧವನ್ನು ನೆನಪಿಸಿ ಕೊಂಡು ಇಲ್ಲಿ ಮಾಡುತ್ತಿರುವ ಮಾನವೀಯ ಕಾರ್ಯ ಹೀಗೆಯೇ ಮುಂದುವರಿಯಲಿ ಎಂದು ಆಶೀರ್ವ ದಿಸಿದರು. ಜಲಸಂರಕ್ಷಣಾ ತಜ್ಞ ಪುತ್ತೂರಿನ ಶ್ರೀಶಕುಮಾರ ಅವರು ನೀರು ಇಂಗಿಸುವ ಅಗತ್ಯ, ಅನಿವಾರ್ಯತೆಯನ್ನು ತಿಳಿಸಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸುವ ಈ ಯೋಜನೆ ಮಾದರಿ ಎಂದರು. ಘಟಕ ದ ನಿರ್ಮಾಣ ಕಾರ್ಯ ನಡೆಸಿದ ಬೆಂಗಳೂರಿನ ಗ್ಲೋಬಲ್ ಟೆಕ್ನಾಲ ಜೀಸ್ ಸಂಸ್ಥೆಯ ನಿರ್ದೇಶಕ ಬಾಬಾ ಸಾಹೇಬ ಎ.ಸಿ ಘಟಕದ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಉದ್ಯಮಿ ಡಾ ವಿಶ್ವಕುಮಾರ್, ರಾಷ್ಟ್ರೀಯ ಮಹಿಳಾ ಮೋರ್ಚಾದ ಸದಸ್ಯೆ ಅಶ್ವಿನಿ. ಎಂ.ಎಲ್ ಶುಭಕೋರಿದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಅಧ್ಯಕ್ಷ ಡಾ ಉದಯಕುಮಾರ ನೂಜಿ ಸ್ವಾಗತಿಸಿ, ಖಜಾಂಚಿ ಡಾ ಶಾರದಾ ವಂದಿಸಿದರು. ಆಶ್ರಮದ ನಿವಾಸಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು.