ತ್ಯಾಜ್ಯ ಸಮಸ್ಯೆ: ನೂರಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ
ಕಾಸರಗೋಡು: ನೂರಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುವ ಯಾವುದೇ ಕಾರ್ಯಕ್ರಮಗಳಿಗೆ ಇನ್ನು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪಡೆಯಬೇಕು. ಮಾತ್ರವಲ್ಲ ಅಂತಹ ಕಾರ್ಯಕ್ರಮಗಳ ತ್ಯಾಜ್ಯಗಳನ್ನು ಅವರೇ ಕಡ್ಡಾಯವಾಗಿ ಸಂಸ್ಕರಿಸಬೇಕು. ಇಂತಹ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದೆಂದು ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ.
ತ್ಯಾಜ್ಯ ಹಾಗೂ ಮಲೀನೀಕರಣ ತಡೆಗಟ್ಟಲು ಹೈಕೋರ್ಟ್ ನೀಡಿರುವ ನಿರ್ದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಹೈಕೋರ್ಟ್ ನೀಡಿರುವ ನಿರ್ದೇಶಗಳ ಆಧಾರದಲ್ಲಿ ಮಾತ್ರವೇ ಸಾರ್ವಜನಿಕ ಸ್ಥಳಗಳಲ್ಲಿ ಬೋರ್ಡ್ ಬ್ಯಾನರ್ ಇತ್ಯಾದಿಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗುವುದು.
ಕೇರಳವನ್ನು ಸಂಪೂರ್ಣ ತ್ಯಾಜ್ಯ ಮುಕ್ತ ರಾಜ್ಯವನ್ನಾಗಿಸುವ ಅಭಿಯಾನವನ್ನು ಈಗಾಗಲೇ ಆರಂಭಿಸಲಾಗಿದೆ. ಇದರಂತೆ ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಪೈಕಿ 8337 ವಾರ್ಡ್‌ಗಳನ್ನು ಈಗಾಗಲೇ ತ್ಯಾಜ್ಯಮುಕ್ತ ವಾರ್ಡ್‌ಗಳನ್ನಾಗಿ ಮಾರ್ಪಡಿಸಲಾಗಿದೆ. ಇಂತಹ ಕ್ರಮ ಎಲ್ಲಾ ವಾರ್ಡ್‌ಗಳಲ್ಲಿ ಈಗ ಮುಂದುವರಿಯುತ್ತಿದೆ. ಸಾರ್ವಜನಿಕ ಪ್ರದೇಶಗಳು, ರಸ್ತೆಗಳು ಖಾಸಗೀ ಹಿತ್ತಿಲು ಮತ್ತು ರಸ್ತೆಗಳಲ್ಲಿ, ತ್ಯಾಜ್ಯಗಳನ್ನು ತಂದೆಸೆಯುವವರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿರ್ದೇಶ ನೀಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.