ದೇಶದ ಮೊದಲ ಡಿಜಿಟಲ್ ಸಾಕ್ಷರತಾ ಜಿಲ್ಲೆಯಾಗಿ ಕಾಸರಗೋಡು: ಘೋಷಣೆ ಮುಂದಿನ ತಿಂಗಳು
ಕಾಸರಗೋಡು: ಸ್ಮಾರ್ಟ್ ಫೋನ್ನ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಜಿಲ್ಲಾ ಪಂಚಾಯತ್ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಜ್ಯಾರಿಗೊಳಿಸಿರುವ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆ ಕೊನೆಯ ಹಂತದಲ್ಲಿದೆ. ೩೮ ಗ್ರಾಮ ಪಂಚಾಯತ್ಗಳಲ್ಲೂ, ೩ ನಗರಸಭೆಗಳಲ್ಲಾಗಿ ಜ್ಯಾರಿಗೊಳಿಸುವ ಯೋಜನೆಯ ೮೦ ಶೇಕಡಾಕ್ಕೂ ಹೆಚ್ಚು ತರಗತಿಗಳನ್ನು ಪೂರ್ತಿಗೊಳಿಸಲಾಗಿದೆ. ೧೦೧೨೭೨ ಮಂದಿ ಯೋಜನೆಯ ಮೂಲಕ ಡಿಜಿಟಲ್ ಸಾಕ್ಷರತೆ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಸ್ಮಾರ್ಟ್ ಫೋನ್ ಉಪಯೋಗಿಸುವ ೩೦ರಿಂದ ೬೦ರ ಮಧ್ಯೆ ಪ್ರಾಯದವರಿಗೆ ಇ-ಮೇಲ್ ಐಡಿ, ಖಾಸಗಿತನ ಹಾಗೂ ಸುರಕ್ಷಿತತೆ, ಬಿಲ್ ಪಾವತಿ ವ್ಯವಹಾರ, ಕ್ಯೂಆರ್ ಕೋಡ್ ಸ್ಕ್ಯಾನಿಂಗ್, ಗೂಗಲ್ ಪೇ ಆಧಾರದಲ್ಲಿರುವ ವ್ಯವಹಾರಗಳು, ಸರಕಾರಿ ಸೇವೆಗಳು, ಡಿಜಿಟಲ್ ಲಾಕರ್ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವ ಬಗ್ಗೆ ಈ ಯೋಜನೆಯಲ್ಲಿ ತಿಳಿಸಲಾಗುತ್ತಿದೆ. ೨೦ರಿಂದ ೩೦ ಮಂದಿ ಒಂದು ತರಗತಿಯಲ್ಲಿದ್ದು, ೨ ಗಂಟೆ ತರಗತಿ ನಡೆಸಲಾಗುತ್ತದೆ.
ಜಿಲ್ಲೆ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಘೋಷಣೆಯನ್ನು ಮುಂದಿನ ತಿಂಗಳ ಕೊನೆಗೆ ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲಾ ಮಟ್ಟದ ಘೋಷಣೆಯೊಂದಿಗೆ ಕಾಸರಗೋಡು ಜಿಲ್ಲೆ ಭಾರತದಲ್ಲೇ ಪ್ರಥಮವಾಗಿ ಡಿಜಿಟಲ್ ಸಾಕ್ಷರತೆ ಪೂರ್ತಿಗೊಳಿಸಿದ ಜಿಲ್ಲೆಯಾಗಿ ಬದಲಾಗಲಿದೆ. ಘೋಷಣೆಗೆ ಮುಂಚಿತ ಪಂಚಾಯತ್ ಮಟ್ಟದ ಘೋಷಣೆಗಳು ನಡೆಯಲಿದೆ. ಜಿಲ್ಲೆಯಲ್ಲಿ ಮೊದಲ ಡಿಜಿಟಲ್ ಪಂಚಾಯತ್ ಆಗಿ ಅಜಾನೂರು ಪಂಚಾಯತ್ನ್ನು ಘೋಷಿಸಲಾಗಿದೆ.
ಜಿಲ್ಲೆ ಸಂಪೂರ್ಣ ಡಿಜಿಟಲ್ ಸಾಕ್ಷರತೆಯಾಗಿ ಘೋಷಿಸಲು ಇರುವ ಕಾರ್ಯಕ್ರಮದ ಯಶಸ್ವಿಗೆ ಸಮಿತಿ ರೂಪೀಕರಿಸಲಾಗಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷೆಯಾಗಿಯೂ, ಕಾರ್ಯದರ್ಶಿ ಪಿ.ಕೆ. ಸಜೀವ್ ಕೋ-ಆರ್ಡಿನೇಟರ್ ಆಗಿಯೂ, ಪಿ.ಎನ್. ಬಾಬು ಸಂಚಾಲಕರಾಗಿದ್ದಾರೆ.