ಧರ್ಮದ ಮೇಲಿನ ನಂಬಿಕೆಯ ಜಾಗೃತಿ ನಮ್ಮಲ್ಲಿ ಬೆಳೆಯಬೇಕು-ಹಾರಿಕಾ ಮಂಜುನಾಥ
ಬದಿಯಡ್ಕ: ಧರ್ಮದ ಮೇಲಿನ ನಂಬಿಕೆಯ ಜಾಗೃತಿ ನಮ್ಮಲ್ಲಿ ಬೆಳೆಯಬೇಕು. ಅಷ್ಟಮಿ ವೇಷ ಧರಿಸಿದ ಪ್ರತಿಯೊಂದು ಮಗುವೂ ರಾಧೆ, ಕೃಷ್ಣರ ಆದರ್ಶವನ್ನು ಪಾಲಿಸಿಕೊಂಡು ಬೆಳೆದಾಗ ಧರ್ಮದ ರಕ್ಷಣೆಯಾಗುತ್ತದೆ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಬೆಂಗಳೂರು ಹೇಳಿದರು. ಯುವಕೇಸರಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಿಳಿಂಗಾರು ಬಾಲಗಿರಿ ಇವರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರಗಿದ 10ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೂಧರ್ಮದ ಈ ಭಾರತ ದೇಶದಲ್ಲಿ ಯುವಕರ ಮನಮನಸ್ಸನ್ನು ಕೇಸರಿಮಯವಾಗಿಸಿದಾಗ ಇಡೀ ಊರು, ಧರ್ಮ ಭದ್ರಗೊಳ್ಳುತ್ತದೆ. ಭಗವಂತನ ಶಕ್ತಿಯಿಂದ ಈ ಮಣ್ಣಿನಲ್ಲಿ ಕೇಸರಿಯುವಕರ ತಂಡ ಬೆಳೆದು ನಿಂತು ಧರ್ಮರಕ್ಷಣೆಯ ಕಾರ್ಯಕ್ಕೆ ಪಣತೊಟ್ಟಿದ್ದಾರೆ. ತನ್ನ ಬಾಲಲೀಲೆಯ ಮೂಲಕ ಕೃಷ್ಣ ಎಲ್ಲರಲ್ಲೂ ಆಧ್ಯಾತ್ಮಿಕ ಚಿಂತನೆಯನ್ನು ಮೂಡಿಸಿದ್ದಾನೆ ಎಂದರು. ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದಿಯಡ್ಕ ಪಂ. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷೆ ಸೌಮ್ಯಾ ಮಹೇಶ್ ನಿಡುಗಳ, ಯುವಕೇಸರಿ ಅಧ್ಯಕ್ಷ ಪ್ರವೀಣ್, ಸದಸ್ಯರಾದ ಲೋಕೇಶ್ ಯು, ರಾಜೇಶ್, ಯಜ್ಞೇಶ್, ಶ್ರೀ ಶಾಸ್ತಾ ಕ್ಲಬ್ ಅಧ್ಯಕ್ಷ ರಂಜಿತ್ ಅಜ್ಜರಕೋಡಿ, ರತ್ನಗಿರಿ ಓಂಕಾರ್ ಫ್ರೆಂಡ್ಸ್ ಅಧ್ಯಕ್ಷ ಶಿವರಾಮ ಮೊಳೆಯಾರು ಉಪಸ್ಥಿತರಿದ್ದರು. ಪತ್ರಕರ್ತ, ಸಾಹಿತಿ ಗಣೇಶ್ ಪಿ.ಎಂ. ಮುಂಡಾನ್‌ತ್ತಡ್ಕ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.