ನಗರದಲ್ಲಿ ಅಂಗಡಿಗಳಿಂದ ಕಳವು ಯತ್ನ : ಇಬ್ಬರ ಬಂಧನ
ಕಾಸರಗೋಡು: ನಗರದ ವಿವಿಧ ವ್ಯಾಪಾರ ಸಂಸ್ಥೆಗಳ ಶೆಟರ್ ಒಡೆದು ಕಳವಿಗೆ ಯತ್ನಿಸಿದ ಹಾಗೂ ಒಂದು ಜವುಳಿ ಅಂಗಡಿಯಿಂದ ಬಟ್ಟೆಬರೆ ಕಳವುಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಪಿ. ಸುರೇಶ್ಬಾಬು ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಬನ್ಗಾಟಿ ನಿವಾಸಿಗಳಾದ ಅಲಾವುದ್ದೀನ್ಖಾನ್ (28) ಮತ್ತು ಜನ್ಶಾದ್ಖಾನ್ (29) ಬಂಧಿತರಾದ ಆರೋಪಿಗಳು. ಈ ಕಳವು ತಂಡದಲ್ಲಿ ನಾಲ್ವರು ಒಳಗೊಂಡಿರುವ ಮಾಹಿತಿ ಲಭಿಸಿದೆಯೆಂದೂ ಅದರಂತೆ ಇತರ ಇಬ್ಬರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಈ ತಂಡದವರು ಕಳ್ಳತನವನ್ನು ಹವ್ಯಾಸ ಮಾಡಿಕೊಂಡವರಾಗಿದ್ದಾರೆ. ಇವರು ಈ ಹಿಂದೆ ಶಿಕ್ಷೆಗೂ ಒಳಗಾಗಿ ಮಂಗಳೂರು ಜೈಲಿನಲ್ಲಿದ್ದರು. ಬಳಿಕ ಕಳೆದ ವಾರವಷ್ಟೇ ಇವರು ಜೈಲಿನಿಂದ ಬಿಡುಗಡೆಗೊಂಡು ನಂತರ ಕಳವು ದಂಧೆ ಮುಂದುವರಿಸಿ ದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ.
ಸಿವಿಲ್ ಪೊಲೀಸ್ ಆಫೀಸರ್ಗಳಾದ ಚಂದ್ರಶೇಖರನ್, ಸತೀಶನ್ ಮತ್ತು ನಿಖೇಶ್ ಎಂಬಿವರು ಆರೋಪಿಗಳನ್ನು ಬಂಧಿಸಿದ ತಂಡದಲ್ಲಿ ಒಳಗೊಂಡಿದ್ದರು.