ನಗರದಲ್ಲಿ ಮುಂದುವರಿದ ಕಳ್ಳರ ಹಾವಳಿ: ಕುಟುಂಬಶ್ರೀ ತರಕಾರಿ ಸ್ಟಾಲ್‌ನಿಂದ ಹಣ ಕಳವು
ಕಾಸರಗೋಡು: ಕಾಸರಗೋಡು ನಗರದಲ್ಲಿ ರಾತ್ರಿ ವೇಳೆ ಕಳ್ಳರ ಹಾವಳಿ ಎಗ್ಗಿಲ್ಲದೆ ಈಗಲೂ ಮುಂದುವರಿಯುತ್ತಿದ್ದು ನಿನ್ನೆ ಕುಟುಂಬಶ್ರೀ ತರಕಾರಿ ಸ್ಟಾಲ್‌ನಿಂದ ಕಳ್ಳರು ಹಣ ಅಪಹರಿಸಿದ್ದಾರೆ.
ಕಾಸರಗೋಡು ನಗರದ ಕೆಪಿಆರ್ ರಾವ್ ರಸ್ತೆ ಬಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸನಿಹದಲ್ಲೇ ಕಾರ್ಯವೆಸಗುತ್ತಿರುವ ಕಾಸರಗೋಡು ನಗರಸಭೆಯ ಕುಟುಂಬಶ್ರೀ ಘಟಕದ ತರಕಾರಿ ಸ್ಟಾಲ್‌ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಲ್ಲಿಂದ ೫೦೦೦ ರೂ. ನಗದು ಅಪಹರಿಸಿದ್ದಾರೆ. ಮಾತ್ರವಲ್ಲ ಅದರ ಪಕ್ಕದಲ್ಲೇ ಇರುವ ಪ್ರಭನ್ ಎಂಬವರ ಲಾಟರಿ ಸ್ಟಾಲ್‌ನ ಬೀಗವನ್ನು ಕಳ್ಳರು ಒಡೆದಿದ್ದಾರೆ. ಆದರೆ ಅಲ್ಲಿಂದ ಏನೂ ಲಭಿಸಿಲ್ಲ. ಈ ಬಗ್ಗೆ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಗರದ ನೆಲ್ಲಿಕುಂಜೆ ಜಂಕ್ಷನ್ ಮತ್ತು ನೆಲ್ಲಿಕುಂಜೆ ಬೀಚ್‌ನ ಎರಡು ಮಸೀದಿಗಳಿಗೆ ಮೊನ್ನೆ ರಾತ್ರಿ ಕಳ್ಳರು ನುಗ್ಗಿ ಕಳವು ಯತ್ನ ನಡೆಸಿದ್ದರು. ಅದರ ಬೆನ್ನಲ್ಲೇ ನಿನ್ನೆ ಕುಟುಂಬಶ್ರೀ ಸ್ಟಾಲ್‌ನಲ್ಲಿ ಕಳವು ನಡೆದಿದೆ. ಉಳಿಯತ್ತಡ್ಕ ಮಸೀದಿಗೆ ಎರಡು ದಿನಗಳ ಹಿಂದೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಕದ್ದೊಯ್ದಿದ್ದರು.