ನಗರದ ನೆಲ್ಲಿಕುಂಜೆ ಬೀಚ್ ರಸ್ತೆಗೆ ಗವಾಸ್ಕರ್‌ರ ಹೆಸರು: ನಾಮಕರಣಕ್ಕಾಗಿ ಗವಾಸ್ಕರ್ ಶೀಘ್ರ ಕಾಸರಗೋಡಿಗೆ ಆಗಮನ

ಕಾಸರಗೋಡು: ಕಾಸರಗೋಡು ನಗರದಿಂದ ನೆಲ್ಲಿಕುಂಜೆ ಬೀಚ್‌ಗೆ ತೆರಳುವ ರಸ್ತೆ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ’ಲಿಟ್ಲ್ ಮಾಸ್ಟರ್’ ಎಂದೇ ಕರೆಯಲ್ಪ ಡುವ ಸುನಿಲ್ ಗವಾಸ್ಕರ್‌ರ ಹೆಸರಲ್ಲಿ ಗುರುತಿಸಲ್ಪಡಲಿದೆ. ನಗರಸಭೆ ಈ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ. ಈ ತಿಂಗಳ ಕೊನೆಗೆ ಅಥವಾ ನವೆಂಬರ್‌ನಲ್ಲಿ ಸುನಿಲ್ ಗವಾಸ್ಕರ್ ಕಾಸರಗೋಡಿಗೆ ಆಗಮಿಸಿ ಈ ರಸ್ತೆಗೆ ತಮ್ಮ ಹೆಸರನ್ನು ಘೋಷಿಸಲಿದ್ದಾರೆ. ತಳಂಗರೆ ನಿವಾಸಿಯೂ, ಗಲ್ಫ್‌ನಲ್ಲಿ ಉದ್ಯಮಿ ಯಾಗಿರುವ ಖಾದರ್ ತೆರುವತ್ ಎಂಬವರು ಸುನಿಲ್ ಗವಾಸ್ಕರ್‌ರ ಆತ್ಮೀಯರಾಗಿದ್ದು, ಅದರಿಂದ ಅವರ ವಿಶೇಷ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ನಗರಸಭೆ ಅಬ್ಬಾಸ್ ಬೀಗಂ ತಿಳಿಸಿದ್ದಾರೆ.

1983ರಲ್ಲಿ ವೆಸ್ಟ್ ಇಂಡೀಸ್‌ನ್ನು ಸೋಲಿಸಿ ಭಾರತ ಮೊಟ್ಟ ಮೊದಲಾಗಿ ವಿಶ್ವಕಪ್ ಗೆದ್ದ ಸಂಭ್ರಮದ ೪೦ನೇ ವರ್ಷಾಚರಣೆ ಮುಂಬೈಯಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಖಾದರ್ ತೆರುವತ್ ಆಮಂತ್ರಿತರಾಗಿದ್ದರು. ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್‌ರನ್ನು ಭೇಟಿಯಾಗಿ ಕಾಸರಗೋಡಿನ ರಸ್ತೆಯೊಂದಕ್ಕೆ ಅವರ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದರು. ಅದಕ್ಕೆ ಗವಾಸ್ಕರ್ ಒಪ್ಪಿಕೊಂಡಿದ್ದರು. ಇದರಂತೆ ನೆಲ್ಲಿಕುಂಜೆ ರಸ್ತೆಗೆ ‘ಸುನಿಲ್ ಗವಾಸ್ಕರ್ ಬೀಚ್ ರಸ್ತೆ’ ಎಂದು ನಾಮಕರಣ ಮಾಡುವಂತೆ ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂರನ್ನು ಖಾದರ್ ತೆರುವತ್ ಆಗ್ರಹಪಟ್ಟಿದ್ದಾರೆ.

ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಸುನಿಲ್ ಗವಾಸ್ಕರ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಸರಗೋಡಿಗೆ ಸ್ವಾಗತಕೋರಿದ್ದಾರೆ. 1983ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಭಾರತ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ಆರಂಭಿಕ ಆಟಗಾರನಾಗಿದ್ದುದು ಸುನಿಲ್ ಗವಾಸ್ಕರ್ ಆಗಿದ್ದರು.

ಗವಾಸ್ಕರ್ ಬೀಚ್ ರಸ್ತೆಯೆಂದು ನಾಮಕರಣಗೊಳಿಸಲಿರುವ ನೆಲ್ಲಿಕುಂಜೆ ಬೀಚ್ ರಸ್ತೆ  ಹಲವು ವಿಶೇಷತೆಗಳನ್ನು ಹೊಂದಿದೆ. ಕಾಸರಗೋಡು ನಗರದ ಬ್ಯಾಂಕ್ ರಸ್ತೆಯ ಮಠದ ಪೇಟೆಯಿಂದ ಆರಂಭಗೊಂಡು ಕಡಲ ಕಿನಾರೆಯಲ್ಲಿ  ಕೊನೆಗೊಳ್ಳುವ ಈ ರಸ್ತೆ ಸುಮಾರು 3 ಕಿಲೋ ಮೀಟರ್ ಇದೆ.

ಪ್ರಸಿದ್ಧ ಆರಾಧನಾಲಯಗಳಾದ  ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ನಾರಾಯಣಗುರು ಮಂದಿರ, ತಂಙಳ್ ಉಪ್ಪಾಪ ಮಸೀದಿ, ಸ್ವಾಮಿಕಟ್ಟೆಯೆಂದೇ ಪ್ರಸಿದ್ಧವಾದ ಶ್ರೀ ಚಂದ್ರನಾಥ ಸ್ವಾಮಿಯ ಸಮಾಧಿ ಸ್ಥಳ ನೆಲ್ಲಿಕುಂಜೆ ಸರಕಾರಿ ಹೆಣ್ಮಕ್ಕಳ ಶಾಲೆ ದೀಪಸ್ತಂಭ, ಬಂದರು ಮೊದಲಾದೆಡೆಗೆ ಇದೇ ರಸ್ತೆ ಮೂಲಕ ತೆರಳಬೇಕು. ಇದು ಮಾತ್ರವಲ್ಲದೆ ಕಾಸರಗೋಡಿನ ಸಾಂಸ್ಕೃತಿಕ ರಂಗ ಚಟುವಟಿಕೆಗಳಿಗೆ ಆಶ್ರಯತಾಣವಾದ ಲಲಿತಕಲಾ ಸದನವೂ ನೆಲ್ಲಿಕುಂಜೆ ರಸ್ತೆಯಲ್ಲಿದೆ. ಕೆಎಸ್‌ಇಬಿಯ ನೆಲ್ಲಿಕುಂಜೆ ಸೆಕ್ಷನ್  ಕಚೇರಿ ಕೂಡಾ ಇಲ್ಲೆ ಕಾರ್ಯಾ ಚರಿಸು ತ್ತಿದೆ. ಒಂದು ಕಾಲದಲ್ಲಿ ಜನಪ್ರಿಯ ವಾಗಿದ್ದ ಚಲನಚಿತ್ರ ಮಂದಿರವಾದ ಗೀತಾ ಟಾಕೀಸ್, ಹಲವು ಮಂದಿಗೆ ಉದ್ಯೋಗ ನೀಡಿದ ಎಚ್‌ಎಂಟಿ ವಾಚಸ್‌ನ ಬಿಡಿ ಭಾಗಗಳ ಜೋಡಣಾ ಕೇಂದ್ರವಾದ ಆಸ್ಟ್ರಲ್ ವಾಚಸ್ ಕಂಪೆನಿ ಕೂಡಾ ಇದೇ ರಸ್ತೆಯಲ್ಲಿತ್ತು. ಮಾತ್ರವಲ್ಲ, ವಿದೇಶಗಳಿಗೆ ಸಿಗಡಿ ಮೀನು ರಫ್ತು ಮಾಡುತ್ತಿದ್ದ ಕೇಂದ್ರವೂ ಇದಾಗಿತ್ತು.

Leave a Reply

Your email address will not be published. Required fields are marked *

You cannot copy content of this page