ನಯಬಜಾರ್ನಲ್ಲಿ ಅಂಡರ್ಪಾಸ್ ನಿರ್ಮಾಣ ಕಾಮಗಾರಿ ವಿಳಂಬ ಆರೋಪ
ಉಪ್ಪಳ: ನಯಬಜಾರ್ನಲ್ಲಿ ಸರ್ವೀಸ್ ರಸ್ತೆ ಇಕ್ಕೆಡೆಗಳಲ್ಲಿ ನಿರ್ಮಾಣಗೊಂಡಿದ್ದರೂ ಅಂಡರ್ ಪಾಸ್ನಿರ್ಮಾಣ ಕಾಮಗಾರಿ ಇನ್ನೂ ಪೂರ್ತಿಗೊಳ್ಳದ ಹಿನ್ನೆಲೆಯಲ್ಲಿ ಇಕ್ಕೆಡೆಯಲ್ಲಿರುವ ಆಸ್ಪತ್ರೆ ಸಹಿತ ಸರಕಾರಿ ಕಚೇರಿಗಳಿಗೆ ತೆರಳಲು ತೀವ್ರ ಸಮಸ್ಯೆ ಉಂಟಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಇದೀಗ ಎರಡು ಭಾಗದ ಸರ್ವೀಸ್ ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿದೆ.
ಮಧ್ಯ ಭಾಗದಲ್ಲಿರುವ ಹೆದ್ದಾರಿ ರಸ್ತೆ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಎರಡು ಕಡೆ ಅಲ್ಲಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದರಿಂದ ಅಂಬಾರು, ಚೆರುಗೋಳಿ, ಪ್ರತಾಪನಗರ, ಸೋಂಕಾಲು ಸಹಿತ ಪರಿಸರ ಪ್ರದೇಶದ ಜನರಿಗೆ ರಸ್ತೆಯ ಇಕ್ಕೆಡೆಯಲ್ಲಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ವಿಲೇಜ್ ಆಫೀಸ್, ಶಿಕ್ಷಣ ಇಲಾಖೆ, ಮಂಗಲ್ಪಾಡಿ ಪಂಚಾಯತ್, ಶಾಲೆಗಳು, ಐಲ ಕ್ಷೇತ್ರ ಸಹಿತ ವಿವಿಧೆಡೆಗಳಿಗೆ ತೆರಳಲು ಕುಕ್ಕಾರು ಅಥವಾ ಕೈಕಂಬ ದಾರಿಯಾಗಿ ಸುತ್ತಿಬಳಸಿ ಸಂಚರಿಸಬೇಕಾಗಿದೆ. ನಡೆದು ಹೋಗುವವರು ನಿರ್ಮಾಣ ಹಂತದ ರಸ್ತೆ ಬಳಿಯಲ್ಲಿರುವ ಅಲ್ಪ ಸ್ವಲ್ಪ ದಾರಿಯಿಂದ ತಾತ್ಕಾಲಿಕವಾಗಿ ತೆರಳುತ್ತಿದ್ದಾರೆ. ಇಲ್ಲಿನ ಅಂಡರ್ ಪಾಸ್ ನಿರ್ಮಾಣಗೊಂಡಲ್ಲಿ ಸಂಚಾರ ಸುಗಮಗೊಳ್ಳಬಹುದೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಡರ್ಪಾಸ್ ನಿರ್ಮಣವನ್ನು ಶೀಘ್ರವಾಗಿ ಪೂರ್ತಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.