ನಯಾಬಜಾರ್ನಲ್ಲಿ ಸಂಚಾರ ಸಮಸ್ಯೆ: ಅಂಡರ್ಪಾಸ್ ನಿರ್ಮಾಣಕ್ಕೆ ಬೇಡಿಕೆ
ಉಪ್ಪಳ: ನಯಬಜಾರ್ನಲ್ಲಿ ಹೆದ್ದಾರಿ ಅಡ್ಡ ದಾಟಲು ಅಂಡರ್ ಪಾಸ್ ನಿರ್ಮಿಸಬೇಕೆಂಬ ಬೇಡಿಕೆ ತೀವ್ರಗೊಳ್ಳುತ್ತಿದೆ. ಈಗ ಅಂಡರ್ ಪಾಸ್ ಇಲ್ಲದ ಕಾರಣ ಈ ಪ್ರದೇಶದ ಜನರಿಗೆ ಸಂಚಾರ ಸಮಸ್ಯೆಯಾಗುತ್ತಿದೆ. ನಯಾಬಜಾರ್ನ ಒಂದು ಭಾಗದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ವಿಲ್ಲೇಜ್ ಕಚೇರಿ, ಶಿಕ್ಷಣಾಧಿಕಾರಿ ಕಚೇರಿ, ಮಂಗಲ್ಪಾಡಿ ಪಂಚಾಯತ್, ಸರಕಾರಿ, ಖಾಸಗಿ ಶಾಲೆಗಳು, ಆರಾಧನಾಲಯಗಳು ಇವೆ. ಇನ್ನೊಂದು ಭಾಗದಲ್ಲಿ ಅಗ್ನಿಶಾಮಕ ಕೇಂದ್ರ, ಮೃಗಾಸ್ಪತ್ರೆ ಕೃಷಿ ಕಚೇರಿ, ಆರಾಧನಾಲಯಗಳು ಸಹಿತ ಹಲವು ಸಂಸ್ಥೆಗಳಿವೆ.
ಆಸ್ಪತ್ರೆಗೆ ತೆರಳಬೇಕಾದವರು, ಅಗ್ನಿಶಾಮಕ ದಳದಿಂದ ತುರ್ತಾಗಿ ಸಂಚರಿಸಲು ಇಲ್ಲಿ ಅಂಡರ್ಪಾಸ್ ಇಲ್ಲದ ಕಾರಣ ದೂರದ ಅಂಡರ್ ಪಾಸ್ನ ಮೂಲಕ ಸಾಗಬೇಕಾಗುತ್ತಿದೆ. ಆದರೆ ಆ ಅಂಡರ್ ಪಾಸ್ ಕೂಡಾ ಅವ್ಯವಸ್ಥೆಯಿಂದ ಕೂಡಿದ್ದು, ಇದರಲ್ಲಿ ಸಂಚಾರ ಸಮಸ್ಯೆ ಇದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಇದರಿಂದಾಗಿ ನಯಾಬಜಾರ್ನಲ್ಲೇ ಅಂಡರ್ ಪಾಸ್ ಸೂಕ್ತ ರೀತಿಯಲ್ಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದು, ಇದಕ್ಕಾಗಿ ಪ್ರತಿಭಟನೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ.