ನರೇಂದ್ರಮೋದಿಯವರು ನೀಡುವುದು ಯಶಸ್ವಿ ಗ್ಯಾರೆಂಟಿ-ಸದಾನಂದ ಗೌಡ
ಕಲ್ಲಿಕೋಟೆ: ಪ್ರಧಾನಮಂತ್ರಿ ನರೇಂದ್ರಮೋದಿ ಜನರಿಗೆ ನೀಡುವ ಅಭಿವೃದ್ಧಿಯ ಗ್ಯಾರೆಂಟಿ ಭಾರತದ ಇತರೆಡೆಗಳಲ್ಲಿ ಯಶಸ್ವಿಯಾದ ಮಾದರಿ ಯೋಜನೆಗ ಳಾಗಿವೆಯೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ರೈಲ್ವೇ ಸಚಿವ ಡಿ.ವಿ. ಸದಾನಂದ ಗೌಡ ನುಡಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಎನ್‌ಡಿಎ ಕೇರಳ ಪಾದಯಾತ್ರೆಯನ್ನು ವಡಗರದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರ ಕೇರಳವನ್ನು ಅವಗಣಿಸುತ್ತಿದೆಯೆಂಬ ರಾಜ್ಯ ಆಡಳಿತ ಪಕ್ಷದ ಆರೋಪ ಸುಳ್ಳು. ಕೇಂದ್ರ ಸರಕಾರ ಕೇರಳಕ್ಕೆ ೫೭,೦೦ ಕೋಟಿ ರೂಪಾಯಿ ನೀಡಲು ಬಾಕಿಯಿದೆಯೆಂಬ ಪ್ರಚಾರ ವಾಸ್ತವ ವಿರುದ್ಧವೆಂದೂ ಅವರು ತಿಳಿಸಿದರು. ಖರ್ಚಾದ ಹಣದ ಲೆಕ್ಕಾಚಾರವನ್ನು ಕೇಂದ್ರ ಸರಕಾರಕ್ಕೆ ನೀಡದೆ ಕೇರಳ ಮತ್ತೆ ಮತ್ತೆ ಹಣ ಕೇಳುತ್ತಿದೆಯೆಂದು ಕೇಂದ್ರ ಹಣಕಾಸು ಸಚಿವರೇ ತಿಳಿಸಿದ್ದಾರೆ. ಆದರೆ ಅದಕ್ಕೆ ಯಾವುದೇ ಉತ್ತರ ನೀಡಲು ಕೇರಳ ಸರಕಾರಕ್ಕೆ ಸಾಧ್ಯವಿಲ್ಲವೆಂದೂ ಸದಾನಂದ ಗೌಡ ತಿಳಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಪಿ. ಶ್ರೀಶನ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಕಣ್ಣೂರು ಜಿಲ್ಲಾಧ್ಯಕ್ಷ ಎನ್.ಹರಿದಾಸ್, ಯುವಮೋರ್ಛಾ ರಾಜ್ಯಾಧ್ಯಕ್ಷ ಪ್ರಫುಲ್‌ಕೃಷ್ಣ ಮೊದಲಾದವರು ಭಾಗವಹಿಸಿದರು.