ನಳ್ಳಿಯಲ್ಲಿ ಗಾಳಿ, ರಸ್ತೆಯಲ್ಲಿ ನೀರು: ಕಷ್ಣನಗರದಲ್ಲಿ ಕುಡಿಯುವ ನೀರು ಪೋಲು
ಬೇಕೂರು: ಕುಡಿಯಲು ನೀರು ವಿತರಿಸಲು ಮನೆಗಳಿಗೆ ಸಂಪರ್ಕ ನೀಡಿದ ನಳ್ಳಿಗಳಲ್ಲಿ ನೀರು ಬರದಿದ್ದರೂ ನೀರು ವಿತರಿಸಲು ಹಾಕಿದ ಪೈಪ್ನಿಂದ ಸೋರಿಕೆಯಾಗಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದು ಮಂಗಲ್ಪಾಡಿ ಪಂ.ನ ೭ನೇ ವಾರ್ಡ್ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿದೆ. ಕಳೆದ ೫ ತಿಂಗಳಿನಿಂದ ದಿನವೂ ನೀರು ರಸ್ತೆಯಲ್ಲೇ ಹರಿಯುತ್ತಿರುವುದನ್ನು ಕಂಡು ಸ್ಥಳೀಯರು ಸಹಿ ಹಾಕಿದ ಮನವಿಯನ್ನು ಕಾಸರಗೋಡಿನ ಜಲ ಪ್ರಾಧಿಕಾರದ ಅಧಿಕಾರಿಗಳಿಗೆ ನೀಡಿದ್ದರು. ಆದರೆ ಪೈಪ್ ದುರಸ್ತಿಗೆಂದು ಹೊಂಡ ತೋಡಿ ಬಳಿಕ ಅದನ್ನು ಹಾಗೇ ಉಪೇಕ್ಷಿಸಿರುವುದು ಕಂಡು ಬರುತ್ತಿದ್ದು, ತೋಡಿದ ಹೊಂಡದಲ್ಲಿ ನೀರು ತುಂಬಿ ತುಳಕಿ ರಸ್ತೆಯಲ್ಲಿ ಹರಿಯುತ್ತಿದೆ. ಕೃಷ್ಣನಗರದಲ್ಲಿ ಈ ಸ್ಥಿತಿ ಇದ್ದು, ಚೆರುಗೋಳಿ ಸಹಿತ ೭ನೇ ವಾರ್ಡ್ನ ವಿವಿಧ ಕಡೆಗಳಲ್ಲಿ ನಳ್ಳಿಯಲ್ಲಿ ನೀರು ಲಭಿಸುವುದಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಪೈಪ್ ಹಾನಿಯಾಗಿ ನೀರು ಸೋರಿಕೆಯಾಗುವ ಕಾರಣ ಎತ್ತರದ ಪ್ರದೇಶಗಳಿಗೆ ನೀರು ತಲುಪುತ್ತಿಲ್ಲ.
ಇದರಿಂದ ಹಲವಾರು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಇನ್ನು ಬೇಸಿಗೆ ತೀವ್ರಗೊಳ್ಳಲಿರುವಂತೆ ನದಿಯ ನೀರನ್ನು ಈ ರೀತಿ ಪೋಲು ಮಾಡಿ ಮುಂದೆ ನೀರೇ ಇಲ್ಲದಂತೆ ಮಾಡುವುದನ್ನು ಕೊನೆಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.