ನವಕೇರಳ ಸದಸ್ಸ್: ಕುಟುಂಬಶ್ರೀಯ ಬೆದರಿಸುವ ತಂತ್ರ ರಾಜಕೀಯ ದಿವಾಳಿತನ- ಬಿಜೆಪಿ ಆರೋಪ
ಮಂಜೇಶ್ವರ: ಕುಟುಂಬಶ್ರೀಯನ್ನು ಬೆದರಿಸಿ ನವಕೇರಳ ಸದಸ್ಸ್ ಕಾರ್ಯಕ್ರಮಕ್ಕೆ ಜನ ಸೇರಿಸುವ ಪ್ರಯತ್ನ ಸಿಪಿಎಂ ನಡೆಸುತ್ತಿದ್ದು, ಇದು ಅಧಿಕಾರ ದುರುಪಯೋಗವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲವೆಂದು ಬಿಜೆಪಿ ತಿಳಿಸಿದೆ. ಮುಖ್ಯಮಂತ್ರಿ ಹಾಗೂ ಸಚಿವರ ಕಾರ್ಯಕ್ರಮಗಳಿಗೆ ಜನ ಸೇರುವುದಿಲ್ಲವೆಂಬ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಕುಟುಂಬಶ್ರೀಯನ್ನು ಬೆದರಿಸಿ ಜನ ಸೇರಿಸಲು ನಡೆಸುವ ತಂತ್ರ ಸಿಪಿಎಂನ ರಾಜಕೀಯ ದಿವಾಳಿತನದ ಸಂಕೇತವೆಂದು ಬಿಜೆಪಿ ದೂರಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿಸುವುದಾಗಿ ತಿಳಿಸಿದೆ. ಅಟಲ್ ಬಿಹಾರಿ ವಾಜಪೇಯಿಯವರ ಸಂಕಲ್ಪವಾದ ಕುಟುಂಬಶ್ರೀಯನ್ನು ರಾಜ್ಯದಲ್ಲಿ ಎಡರಂಗ ಸರಕಾರ ಅಧಿಕಾರದ ದಾಳವಾಗಿ ಉಪಯೋಗಿಸುತ್ತಿದೆ ಎಂದು ಬಿಜೆಪಿ ದೂರಿದೆ. ಅಲ್ಲದೆ ನವಕೇರಳ ಸದಸ್ಸ್ನಲ್ಲಿ ಕುಟುಂಬಶ್ರೀ ಕಾರ್ಯಕರ್ತೆಯರು, ಉದ್ಯೋಗ ಖಾತರಿ ಕಾರ್ಮಿಕರು, ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಭಾಗವಹಿಸಬಾರದೆಂದು ಬಿಜೆಪಿ ಆಗ್ರಹಿಸಿದೆ.
ಈ ಬಗ್ಗೆ ಮಂಜೇಶ್ವರ ಪಂಚಾಯತ್ ಬಿಜೆಪಿ ಸಮಿತಿ ಪ್ರೇರಣಾದಲ್ಲಿ ಸಭೆ ನಡೆಸಿದ್ದು, ಸುಧಾಮ ಗೋಸಾಡ ಮಾಹಿತಿ ನೀಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಯಾದವ ಬಡಾಜೆ, ಹರಿಶ್ಚಂದ್ರ ಎಂ, ಮಣಿಕಂಠ ರೈ, ರಾಜೇಶ್ ಮಜಲು, ಲಕ್ಷ್ಮಣ ಬಿ.ಎಂ, ವಿನಯ ಭಾಸ್ಕರ್, ಸುರೇಶ ಶೆಟ್ಟಿ, ಸುಪ್ರಿಯಾ ಶೆಣೈ, ತುಳಸಿ ಕುಮಾರಿ, ಎ.ಕೆ. ಕಯ್ಯಾರ್, ರಕ್ಷಣ್ ಅಡೆಕ್ಕಳ, ಭಾಸ್ಕರ್ ಪೊಯ್ಯೆ ಉಪಸ್ಥಿತರಿದ್ದರು. ಚಂದ್ರಹಾಸ್ ಸ್ವಾಗತಿಸಿ, ಯತೀರಾಜ್ ವಂದಿಸಿದರು. ನವೆಂಬರ್ ೧೦ರಂದು ಕಣ್ವತೀರ್ಥದಿಂದ ಆರಂಭಿಸುವ ರವೀಶ ತಂತ್ರಿ ಕುಂಟಾರು ನೇತೃತ್ವದ ತೀರ ದೇಶ ವಾಹನ ಜಾಥಾ ಯಶಸ್ವಿಗೆ ತೀರ್ಮಾನಿಸಲಾಯಿತು.