ನವಕೇರಳ ಸಭೆಯಲ್ಲಿ ನೀಡಿದ ಮನವಿಗೆ ಸ್ಪಂದನೆ: ಕಾನ ಗೋಳಿಯಡ್ಕದಲ್ಲಿ ಹೆಚ್ಚಿದ ಸೇತುವೆ ನಿರೀಕ್ಷೆ
ಬದಿಯಡ್ಕ: ಕನ್ನೆಪ್ಪಾಡಿ- ಕಾನ ಗೋಳಿಯಡ್ಕ ಸೇತುವೆ ನಿರ್ಮಾಣವಾಗಬಹುದೆಂಬ ನಿರೀಕ್ಷೆ ಸ್ಥಳೀಯರಲ್ಲಿ ಈಗ ಹುಟ್ಟಿಕೊಂಡಿದೆ. ಸೇತುವೆಗಾಗಿ ವಾರ್ಡ್‌ನ ಜನಪ್ರತಿನಿಧಿ ರವಿ ಕುಮಾರ್ ರೈ ನವಕೇರಳ ಸಭೆಯಲ್ಲಿ ಮನವಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಸ್ಥಳ ಸಂದರ್ಶಿಸಿ ವರದಿ ನೀಡಲು ಕಾಸರಗೋಡು ಲೋಕೋಪಯೋಗಿ ಇಲಾಖೆ ಸೇತುವೆ ವಿಭಾಗ ಅಧಿಕಾರಿಗಳು ನಿನ್ನೆ ಸ್ಥಳಕ್ಕೆ ತಲುಪಿದ್ದಾರೆ. ಬದಿಯಡ್ಕ ಪಂಚಾಯತ್‌ನ ೧೩ನೇ ವಾರ್ಡ್‌ಗೆ ಸೇರುವ ಗೋಳಿಯಡ್ಕದಲ್ಲಿ ೧೦೦ರಷ್ಟು ಪರಿಶಿಷ್ಟ ಜಾತಿ ಕುಟುಂಬಗಳು ಸೇರಿದಂತೆ ೧೨೦೦ ಮತದಾರರು ಇದ್ದಾರೆ.
ಕನ್ನೆಪ್ಪಾಡಿ ಪೇಟೆಯಿಂದ ಸುಲಭದಲ್ಲಿ ತಲುಪಲು ಸಾಧ್ಯವಾಗುವ ಸ್ಥಳವಾಗಿದೆ ಗೋಳಿಯಡ್ಕ. ಆದರೆ ತೋಡು ದಾಟಿ ವಾಹನ ಸಂಚಾರ ಅಸಾಧ್ಯವಾದ ಹಿನ್ನೆಲೆಯಲ್ಲಿ ಪೇಟೆಯಿಂದ ೩೦ ರೂ. ಆಟೋ ದರ ನೀಡಿ ಸಂಚರಿಸಬಹುದಾದ ಸ್ಥಳಕ್ಕೆ ಈಗ ಸುತ್ತಿಬಳಸಿ ೭೦ ರೂ.ನೀಡಿ ಸ್ಥಳೀಯರು ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೋಡಿಗೆ ಸೇತುವೆ ಬೇಕು ಎಂಬ ಬೇಡಿಕೆ ಹಲವು ವರ್ಷದಿಂದ ಸ್ಥಳೀಯರು ಮುಂದಿಟ್ಟಿದ್ದಾರೆ. ಆದರೆ ಇದಕ್ಕೆ ಇದುವರೆಗೆ ಪರಿಹಾರ ಉಂಟಾಗಿರಲಿಲ್ಲ. ಇಲ್ಲಿ ಸೇತುವೆ ನಿರ್ಮಾಣಕ್ಕೆ ೧ ಕೋಟಿ ೨೫ ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದ್ದು, ಇದಕ್ಕೆ ಪ್ರಪೋಸಲ್ ಸಿದ್ಧಪಡಿಸಲು ಪಂಚಾಯತ್‌ನಿಂದ ಮೊತ್ತ ಮೀಸಲಿಡಲಾಗಿದೆ ಎಂದು ವಾರ್ಡ್ ಪ್ರತಿನಿಧಿ ತಿಳಿಸಿದ್ದಾರೆ. ಸ್ಥಳಕ್ಕೆ ಲೋಕೋಪಯೋಗಿ ಕಾಸರಗೋಡು ಸೇತುವೆ ವಿಭಾಗ ಓವರ್‌ಸಿಯರ್‌ಗಳಾದ ಸೇತುಚಂದ್ರನ್, ರೇಷ್ಮ ಎಂಬಿವರು ತಲುಪಿದ್ದು, ರವಿ ಕುಮಾರ್ ರೈ ಉಪಸ್ಥಿತರಿದ್ದರು.