ನವಕೇರಳ ಸಭೆ: ಮುಖ್ಯಮಂತ್ರಿ ವಿರುದ್ಧ ವಾಟ್ಸಪ್ನಲ್ಲಿ ಅವಹೇಳನಾತ್ಮಕ ಸಂದೇಶ ರವಾನೆ: ಪ್ರಕರಣ ದಾಖಲು
ಮಂಜೇಶ್ವರ: ರಾಜ್ಯದಲ್ಲಿ ನಡೆಯುತ್ತಿರುವ ನವಕೇರಳಯಾತ್ರೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ನಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಅವಹೇಳನಾತ್ಮಕ ರೀತಿಯ ಸಂದೇಶ ರವಾನಿಸಿದ ವ್ಯಕ್ತಿ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಜತ್ತೂರು ತೋಟಂ ಹೌಸಿನ ಅಬ್ದುಲ್ ಮನಾಫ್ (೪೦) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿಯವ ನೇತೃತ್ವದಲ್ಲಿ ನಡೆಸಲಾಗುತ್ತಿರುವ ನವಕೇರಳ ಹಣಕ್ಕಾಗಿ ನಡೆಸಲಾಗುತ್ತಿರುವ ಯಾತ್ರೆಯಾಗಿದೆ ಎಂದೂ, ಕೊಲ್ಲಂನಲ್ಲಿ ಆರು ವರ್ಷದ ಬಾಲಕಿಯ ಅಪಹರಣದಲ್ಲಿ ಮುಖ್ಯಮಂತ್ರಿಯವರ ಕೈವಾಡವಿದೆ ಎಂದೂ ಆರೋಪಿಸುವ ರೀತಿಯ ಅವಹೇಳನಾತ್ಮಕ ವಾಯ್ಸ್ ಸಂದೇಶವನ್ನು ಮಂಜೇಶ್ವರದ ವಾಟ್ಸಪ್ ಗ್ರೂಪ್ ಒಂದರ ಮೂಲಕ ನವೆಂಬರ್ ೩೦ರಂದು ರವಾನಿಸಲಾಗಿತ್ತು. ಅದನ್ನು ಗಮನಿಸಿದ ಪೊಲೀಸ್ ಗುಪ್ತಚರ ವಿಭಾಗ ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಅಬ್ದುಲ್ ಮನಾಫ್ನ ವಿರುದ್ಧ ಐ.ಟಿ. ಆಕ್ಟ್ ಹಾಗೂ ಐಪಿಸಿಯ ೧೫೩ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.