ನವಕೇರಳ ಸಭೆ ಯಾತ್ರೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ರಾಜ್ಯ ಮಾನವ ಹಕ್ಕು ಆಯೋಗ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನವಕೇರಳ ಯಾತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಿಸುವಂತೆ ಮಾಡಿದ ಕ್ರಮದ ವಿರುದ್ಧ ರಾಜ್ಯ ಬಾಲಹಕ್ಕು ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ನವಕೇರಳ ಯಾತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಿಸುವಂತೆ ತಿರೂರಂಗಾಡಿ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಅವರು ನಿರ್ದೇಶ ಹೊರಡಿಸಿದ್ದರು. ಅದರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಇದರ ಹೊರತಾಗಿ ಮಕ್ಕಳನ್ನು ಪಾಲ್ಗೊಳಿಸಿದ ಬಗ್ಗೆ ಮಲಪ್ಪುರಂ ಶಿಕ್ಷಣ ಉಪ ನಿರ್ದೇಶಕರೂ, ಡಿಇಒರಿಂದ ಸ್ಪಷ್ಟೀಕರಣ ಕೇಳಿದ್ದಾರೆ. ಒಂದು ವಾರದೊಳಗಾಗಿ ಸ್ಪಷ್ಟೀಕರಣ ನೀಡುವಂತೆ ನಿರ್ದೇಶ ನೀಡಲಾಗಿದೆ.

ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದಿಂದಲೂ ಕೇರಳಕ್ಕೆ ನೋಟೀಸು ಜ್ಯಾರಿ

ನವಕೇರಳ ಯಾತ್ರೆಗೆ ಬೆಂಬಲ ಸೂಚಿಸಿ ಘೋಷಣೆ ಮೊಳಗಿಸಲು ಶಾಲಾ ವಿದ್ಯಾರ್ಥಿಗಳನ್ನು ಬಳಸಿ ಅದಕ್ಕಾಗಿ ಅವರನ್ನು ಉರಿ ಬಿಸಿಲಲ್ಲಿ ನಿಲ್ಲಿಸಲಾಗಿದೆ ಎಂಬ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಆ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗವೂ ಇನ್ನೊಂದೆಡೆ ಕೇರಳ ಸರಕಾರಕ್ಕೆ ನೋಟೀಸು ಜ್ಯಾರಿಗೊಳಿಸಿದೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ವಿ. ವೇಣು ಅವರಿಗೆ ಈ ನೋಟೀಸು ಕಳುಹಿಸಿಕೊಡಲಾಗಿದೆ. ಇದಕ್ಕೆ ಮುಂದಿನ ಐದು ದಿನಗಳೊಳಗಾಗಿ ಉತ್ತರ ನೀಡುವಂತೆಯೂ ನೋಟೀಸಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page