ನವಕೇರಳ ಸಭೆ: ೨೭೯೪ ದೂರುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರ
ಕಾಸರಗೋಡು: ಮುಖ್ಯಮಂತ್ರಿ ಹಾಗೂ ಸಚಿವರು ನಡೆಸಿದ ನವಕೇರಳ ಸಭೆಯಂಗವಾಗಿ ಸಾರ್ವಜನಿಕರಿಂದ ಲಭಿಸಿದ ದೂರುಗಳ ಪರಿಶೀಲನೆ, ಸ್ಕ್ಯಾನಿಂಗ್ ಡಾಟಾ ಎಂಟ್ರಿ ಪ್ರಗತಿಯಲ್ಲಿದೆ. ಜಿಲ್ಲಾ ಇನ್ಫರ್ಮೇಶನ್ ಕಚೇರಿಯ ಪಿ.ಆರ್. ಚೇಂಬರ್ನಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ವ್ಯವಸ್ಥೆ ಮೂಲಕ ೬೪ ಕಂದಾಯ ನೌಕರರು ದೂರುಗಳಲ್ಲಿ ತಾಂತ್ರಿಕ ಕ್ರಮಗಳನ್ನು ಪೂರ್ತಿಗೊಳಿಸುತ್ತಿದ್ದಾರೆ. ಮೂರು ದಿನದಲ್ಲಿ ಈ ಕೆಲಸ ಪೂರ್ತಿಗೊಳಿಸಲು ದ್ದೇಶಿಸಲಾಗಿತ್ತು. ಆದರೆ ಇದಕ್ಕಿಂತ ಹೆಚ್ಚು ಸಮಯ ಬೇಕಾಗಿ ಬರಲಿದೆ ಎನ್ನಲಾಗಿದೆ. ೨೭೯೪ ದೂರುಗಳನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಲಭಿಸಿದ ೧೯೦೮ ದೂರುಗಳಲ್ಲಿ ೧೮೭೪ ದೂರುಗಳನ್ನುಸ್ಕ್ಯಾನ್ ಮಾಡಿ ಪ್ರತ್ಯೇಕ ಪೋರ್ಟಲ್ಗಿಳಿದು ಇವುಗಳ ಡಾಟಾ ಎಂಟ್ರಿ ೪ ದಿನಗಳಲ್ಲಿ ಪೂರ್ತಿಗೊಳಿಸಲಾಗಿದೆ.
೩೪ ದೂರುಗಳನ್ನು ಅಪೂರ್ಣ ಎಂಬ ಹೆಸರಲ್ಲಿ ಮತ್ತೆ ತಾಲೂಕು ಕಚೇರಿಗೆ ಹಸ್ತಾಂತರಿಸಲಾಗುವುದು. ವಿಲ್ಲೇಜ್ ಕಚೇರಿಗಳಲ್ಲಿ ದೂರುದಾರರ ಮಾಹಿತಿ ಸಂಗ್ರಹಿಸಿದ ಬಳಿಕ ಮತ್ತೆ ಅರ್ಜಿ ಸಲ್ಲಿಸಲು ಆಗ್ರಹಿಸಲಾಗುವುದು. ಕಾಸರಗೋಡು ವಿಧಾನಸಭಾ ಮಂಡಲದಿಂದ ಲಭಿಸಿದ ೩೪೫೧ ದೂರುಗಳ ಸ್ಕ್ಯಾನಿಂಗ್ ನಿನ್ನೆ ಪೂರ್ತಿಗೊಳಿಸಲಾಗಿದೆ. ಇವುಗಳ ಡಾಟಾ ಎಂಟ್ರಿ ಪ್ರಗತಿಯಲ್ಲಿದೆ. ಉದುಮ ವಿಧಾನಸಭಾ ಮಂಡಲದಿಂದ ಲಭಿಸಿದ ೩೭೩೩ ದೂರುಗಳ ಸ್ಕ್ಯಾನಿಂಗ್ ಆರಂಭಗೊಂಡಿದೆ.