ನಾಡಿಗಿಳಿದ ಕಾಡಹಂದಿಗಳು: ನಾಗರಿಕರಲ್ಲಿ ಹೆಚ್ಚಿದ ಭೀತಿ
ಕುಂಬಳೆ: ಶಾಲಾ ಮೈದಾನದಲ್ಲಿ ಕಾಡು ಹಂದಿಯನ್ನು ಕಂಡು ಓಡಿ ಅಪಾಯದಿಂದ ಪಾರಾಗಲು ಪ್ರಯತ್ನಿಸಿದ ಬಾಲಕಿ ಬಿದ್ದು ಗಾಯಗೊಂಡ ಘಟನೆಯ ಬೆನ್ನಲ್ಲೇ ಒಂದು ಡಜನ್ಗಿಂತಲೂ ಹೆಚ್ಚು ಹಂದಿಗಳು ರಸ್ತೆಯಲ್ಲಿ ಅಲೆದಾಡಿರುವುದು ಕಂಡು ಬಂದಿದೆ. ವಾಹನಗಳ ಸಂಚಾರಕ್ಕೂ ಕೂಡಾ ಅವಕಾಶ ನೀಡದೆ ರಸ್ತೆಯಲ್ಲಿ ಅಡಚಣೆ ಸೃಷ್ಟಿಸಿದ ಕಾಡು ಹಂದಿಗಳು ಬಳಿಕ ಸಮೀಪದ ಕಾಡು ಪೊದೆಯತ್ತ ಓಡಿ ಪರಾರಿಯಾಗಿವೆ.
ನಿನ್ನೆ ರಾತ್ರಿ ಆರಿಕ್ಕಾಡಿ- ಬಂಬ್ರಾಣ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ರಸ್ತೆಯಲ್ಲಿ ಒಂದು ಕಾರು ಸಂಚರಿಸುತ್ತಿದ್ದಾಗ ಮರಿಗಳ ಸಹಿತ ಒಂದು ಡಜನ್ಗಿಂತ ಹೆಚ್ಚು ಹಂದಿಗಳು ಅಡ್ಡವಾಗಿ ಬಂದಿವೆ. ಕಾರಿನ ಬೆಳಕಿನಲ್ಲಿ ದೀರ್ಘದೂರಕ್ಕೆ ಓಡಿದ ಬಳಿಕ ಹಂದಿಗಳು ರಸ್ತೆಯಿಂದ ಮರೆಯಾಗಿವೆ.
ನಿನ್ನೆ ಬೆಳಿಗ್ಗೆ ಕೊಡ್ಯಮ್ಮೆಯ ಖಾಸಗಿ ಶಾಲಾ ಮೈದಾನದಲ್ಲಿ ಹಂದಿಯೊಂದು ಶಾಲಾ ಮಕ್ಕಳನ್ನು ಓಡಿಸಿದೆ. ಓಡುತ್ತಿದ್ದಾಗ ಬಿದ್ದು ಗಾಯಗೊಂಡ ಉಜಾರು ನಿವಾಸಿಯಾದ ಬಾಲಕಿ ಗಾಯ ಗೊಂಡಿದ್ದಳು. ವಿಷಯ ತಿಳಿದು ತಲುಪಿದ ಅರಣ್ಯ ಇಲಾಖೆ ಅಧಿಕಾರಿಗಳು ಹಂದಿಯನ್ನು ಬಲೆ ಬಳಸಿ ಸೆರೆ ಹಿಡಿದಿದ್ದರು. ಈ ಘಟನೆಯ ಬೆನ್ನಲ್ಲೇ ನಿನ್ನೆ ರಾತ್ರಿ ಹಂದಿಗಳ ಹಿಂಡು ರಸ್ತೆಗಿಳಿದಿದೆ. ಇತ್ತೀಚೆಗೆ ಕಂಚಿಕಟ್ಟೆಯಲ್ಲಿ ಆಟೋವೊಂದಕ್ಕೆ ಹಂದಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಚಾಲಕನಿಗೆ ಗಾಯಗಳಾಗಿತ್ತು. ಇತ್ತೀಚೆಗಿನ ಕಾಲದಿಂದ ಈ ಪ್ರದೇಶದಲ್ಲಿ ಕಾಡು ಹಂದಿಗಳ ಉಪಟಳ ತೀವ್ರಗೊಂಡಿದ್ದು, ಇದರಿಂದ ಕೃಷಿಕರೂ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.