ನಾಪತ್ತೆಯಾದ ಯುವಕನನ್ನು ರೈಲು ಹಳಿಯಿಂದ ರಕ್ಷಿಸಿದ ಪೊಲೀಸರು
ಕಾಸರಗೋಡು: ನಾಪತ್ತೆಯಾದ ಯುವಕ ರೈಲು ಹಳಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಆತನನ್ನು ರಕ್ಷಿಸಿ ಬಳಿಕ ಮನೆಯವರನ್ನು ಕರೆಸಿ ಅವರ ಜತೆ ಕಳುಹಿಸಿಕೊಟ್ಟ ಘಟನೆ ನಗರದಲ್ಲಿ ನಡೆದಿದೆ.
ಪಾಲ್ಘಾಟ್ ಮಣ್ಣಾರಕ್ಕಾಡ್ ನಿವಾಸಿ ಅಬ್ದುಲ್ ಸಲಾಂ ಎಂಬವರ ಪುತ್ರ ಮೊಹಮ್ಮದ್ ರಫೀಕ್ ಎಂಬ ಯುವಕ ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದನು. ಈತ ಕಾಸರಗೋಡು ರೈಲು ನಿಲ್ದಾಣ ಬಳಿಯ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನಿನ್ನೆ ರಾತ್ರಿ ಕಾಸರಗೋಡು ಕಂಟ್ರೋಲ್ ರೂಂನ ಗಸ್ತು ತಿರುಗುತ್ತಿದ್ದ ಎಎಸ್ಐ ಸಂಜೀವ್ ಕುಮಾರ್ ನೇತೃತ್ವದ ಪೊಲೀಸರು ಕಂಡಿದ್ದಾರೆ. ಅದನ್ನು ಕಂಡ ಪೊಲೀಸರು ಆತನ ಬಳಿ ಹೋಗಿ ವಿಚಾರಿಸಿದಾಗ ಆತ ಅಲ್ಪ ಮಾನಸಿಕ ಸಮಸ್ಯೆ ಅನುಭವಿಸುತ್ತಿರುವುದನ್ನು ಗಮನಿಸಿ ಅಲ್ಲಿಂದ ಆತನನ್ನು ರಕ್ಷಿಸಿ ಬಳಿಕ ಕಾಸರಗೋಡು ಪೊಲೀಸರಿಗೆ ಹಸ್ತಾಂತರಿಸಿದರು. ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಆತನನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಿದ ಬಳಿಕ ವಿಷಯವನ್ನು ಊರಲ್ಲಿರುವ ಯುವಕನ ಮನೆಯವರಿಗೆ ಕರೆದು ತಿಳಿಸಿದ್ದಾರೆ. ಅದರಂತೆ ಯುವಕನ ತಂದೆ ಅಬ್ದುಲ್ ಸಲಾಂ ಕಾಸರಗೋಡಿಗೆ ಆಗಮಿಸಿದರು. ಪೊಲೀಸರು ಯುವಕನನ್ನು ನಂತರ ಅವರ ಜತೆ ಕಳುಹಿಸಿಕೊಟ್ಟಿದ್ದಾರೆ.
ತಮ್ಮ ಮಗನನ್ನು ಪತ್ತೆಹಚ್ಚಿ ರಕ್ಷಿಸಿದ ಪೊಲೀಸರ ಪ್ರಾಮಾಣಿಕ ರೀತಿಯ ಕರ್ತವ್ಯನಿಷ್ಠೆಯನ್ನು ಇದೇ ಸಂದರ್ಭದಲ್ಲಿ ಅಬ್ದುಲ್ ಸಲಾಂ ಶ್ಲಾಘಿಸಿದ್ದಾರೆ. ಮಾತ್ರವಲ್ಲ ಅದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.