ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಆರಂಭ :ಸ್ಪರ್ಧಾಕಣದಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಎ.8ರಂದು ಲಭ್ಯ
ಕಾಸರಗೋಡು: ರಾಜ್ಯದಲ್ಲಿ ಎಪ್ರಿಲ್ ೨೬ರಂದು ನಡೆಯಲಿರುವ ಲೋಕಸಭಾ ಚುನಾವಣೆಗಿರುವ ನಾಮಪತ್ರ ಸಲ್ಲಿಕೆ ನಿನ್ನೆ ಕೊನೆಗೊಂಡಿದೆ. ನಾಮಪತ್ರಗಳ ಸಾಕ್ಷ್ಮ ಪರಿಶೀಲನೆ ಇಂದು ಬೆಳಿಗ್ಗೆ ಆರಂಭಗೊಂಡಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೩ ಉಮೇದ್ವಾರರು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಒಟ್ಟು ೨೯೦ ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ತಿರುವನಂತಪುರ ಲೋಕಸಭಾ ಕ್ಷೇತ್ರ ದಲ್ಲಿ ೨೨ ನಾಮಪತ್ರಗಳು ಸಲ್ಲಿಸಲ್ಪಟ್ಟರೆ, ಅತೀ ಕಡಿಮೆ ಎಂಬಂತೆ ಆಲತ್ತೂರು ಕ್ಷೇತ್ರದಲ್ಲಿ ೮ ನಾಮಪತ್ರಗಳು ಸಲ್ಲಿಸಲ್ಪಟ್ಟಿದ್ದಾರೆ. ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಇಂದು ಸಂಜೆಯೊಗಾಗಿ ಪೂರ್ಣಗೊಳ್ಳಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಎ.೮ರ ಸಂಜೆ ತನಕ ಸಮಯಾವಕಾಶವಿದೆ. ಸ್ಪರ್ಧಾಕಣದಲ್ಲಿ ಉಳಿದುಕೊಳ್ಳಲಿರುವ ಉಮೇದ್ವಾರರ ಸ್ಪಷ್ಟ ರೂಪ ಅಂದು ಸಂಜೆಯೇ ಪ್ರಕಟಗೊಳ್ಳಲಿದೆ.
ನಾಮಪತ್ರ ಸಲ್ಲಿಕೆ ಕ್ರಮ ಮಾರ್ಚ್ ೨೮ರಂದು ಆರಂಭಗೊಂಡಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿಯವರು ಅಂದೇ ಮೊದಲು ಎಂಬಂತೆ ನಾಮಪತ್ರ ಸಲ್ಲಿಸಿದ್ದರು. ಅವರ ಡಮ್ಮಿ ಉಮೇದ್ವಾರರಾಗಿ ಬಿಜೆಪಿಯ ಎ. ವೇಲಾಯುಧನ್ ಕೂಡಾ ಅಂದೇ ನಾಮಪತ್ರ ಸಲ್ಲಿಸಿದ್ದರು. ಇವರು ಸೇರಿದಂತೆ ರಾಜ್ ಮೋಹನ್ ಉಣ್ಣಿತ್ತಾನ್ (ಕಾಂಗ್ರೆಸ್), ಎಂ.ವಿ. ಬಾಲಕೃಷ್ಣನ್ (ಸಿಪಿಎಂ), ಎಂ. ಸುಕುಮಾರಿ (ಬಿಎಸ್ಪಿ), ಸಿ.ಎಚ್. ಕುಂಞಂಬು (ಸಿಪಿಎಂ-ಡಮ್ಮಿ), ಟಿ. ಅನೀಶ್ ಕುಮಾರ್, ಬಾಲಕೃಷ್ಣನ್ ಚೆಮ್ಮಚೇರಿ, ಎನ್. ಬಾಲಕೃಷ್ಣನ್, ಕೇಶವ ನಾಯ್ಕ, ಕೆ. ಮನೋಹರನ್, ಪಿ. ರಾಜೇಂದ್ರನ್ ಮತ್ತು ಕೆ.ಆರ್. ರಾಜೇಶ್ವರಿ (ಎಲ್ಲರೂ ಪಕ್ಷೇತರರು) ಸೇರಿದಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೩ ಮಂದಿ ನಾಮಪತ್ರ ಸಲ್ಲಿಸಿದ್ದಾರೆ.