ನಾಶದ ಹಂತದಲ್ಲಿರುವ ೫೦ಕ್ಕೂ ಅಧಿಕ ವರ್ಷದ ಧಾರಾಳ ನೀರಿರುವ ಬಾವಿ: ಸಂರಕ್ಷಣೆಗೆ ಒತ್ತಾಯ
ಉಪ್ಪಳ: ನೀರಿಗಾಗಿ ಅಲ್ಲಲ್ಲಿ ಬಾವಿ, ಕೊಳವೆ ಬಾವಿ ತೋಡಿ ಯೋಜನೆಗಳನ್ನು ಹಾಕಿ ಸರಕಾರದ ಹಣ ವ್ಯಯ ಮಾಡಿದಾಗ ಕೆಲವೇ ತಿಂಗಳುಗಳಲ್ಲಿ ನೀರು ಬತ್ತಿ ಉಪಯೋಗಶೂನ್ಯವಾಗುವ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಮಧ್ಯೆ ನೀರಿರುವ ಬಾವಿಯನ್ನು ಉಳಿಸಲು ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿಲ್ಲವೆಂದು ಜನರು ಆರೋಪಿಸುತ್ತಾರೆ. ಇದಕ್ಕೆ ಪುಳಿಕುತ್ತಿಯಲ್ಲಿನ ಬಾವಿ ಸ್ಪಷ್ಟ ನಿದರ್ಶನವಾಗಿದೆ. ಈ ಬಾವಿಯನ್ನು ಸುಮಾರು ೫೦ ವರ್ಷದ ಹಿಂದೆ ಕೊರೆಯಲಾಗಿದ್ದು, ಈಗಲೂ ಸ್ಥಳೀಯರು ಇದರಿಂದ ನೀರು ಸೇದಿ ಉಪಯೋಗಿಸುತ್ತಿದ್ದಾರೆ. ಆದರೆ ಬಾವಿ ಶೋಚನೀಯ ಸ್ಥಿತಿಯಲ್ಲಿದೆ. ಬಾವಿಯೊಳಗೆ ಪೊದೆಗಳಿದ್ದು, ಆವರಣ ಗೋಡೆಯ ಸಿಮೆಂಟ್ ಎದ್ದು ಹೋಗಿ ಕಲ್ಲು ಕುಸಿಯುವ ಭೀತಿ ಇದೆ. ಮಂಗಲ್ಪಾಡಿ ಪಂ.ನ ೭ನೇ ವಾರ್ಡ್ ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಬಳಿಯಲ್ಲಿ ಈ ಬಾವಿ ಇದೆ. ಬೇಸಿಗೆ ಕಾಲದಲ್ಲೂ ಧಾರಾಳ ನೀರು ಲಭಿಸುವ ಈ ಬಾವಿಯನ್ನು ಸೂಕ್ತ ರೀತಿಯಲ್ಲಿ ಉಳಿಸಿ ಉಪಯೋಗಪ್ರದಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.