ನಿದ್ರಿಸಿದ್ದ ಬಸ್ ಸಿಬ್ಬಂದಿಗಳ ಬಳಿಯಿಂದ 11,112 ರೂ. ಕಳವು
ಉಪ್ಪಳ: ನಿದ್ರಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸಿಬ್ಬಂದಿಗಳ ಬಳಿಯಿಂದ 11,112 ರೂಪಾಯಿ ಕಳವಿಗೀಡಾದ ಘಟನೆ ನಡೆದಿದೆ.
ಉಪ್ಪಳ-ಪುತ್ತೂರು ಮಧ್ಯೆ ಸಂಚರಿಸುವ ಸಾರಿಗೆ ಬಸ್‌ನ ಸಂಗ್ರಹ ಹಣ ಕಳವಿಗೀಡಾಗಿದೆ. ಮೊನ್ನೆ ರಾತ್ರಿ 7.45 ವೇಳೆ ಅಂದಿನ ಸಂಚಾರ ಮುಗಿಸಿ ಉಪ್ಪಳ ರೈಲ್ವೇ ನಿಲ್ದಾಣ ಬಳಿ ಶ್ರೀ ಅಯ್ಯಪ್ಪ ಮಂದಿರದ ಪರಿಸರದಲ್ಲಿ ಬಸ್ ನಿಲ್ಲಿಸಿ, ಚಾಲಕ ಪ್ರಶಾಂತ್ ಹಾಗೂ ನಿರ್ವಾಹಕ ಮಲ್ಲಿಕಾರ್ಜುನ ಹನ್ಸಾಲಿ ಸಮೀಪದ ಶೆಡ್‌ನಲ್ಲಿ ನಿದ್ರಿಸುತ್ತಿದ್ದರು. ಈ ವೇಳೆ ಸಂಗ್ರಹ ಹಣ, ಟಿಕೆಟ್, ದಾಖಲೆಪತ್ರ ಮೊದಲಾದವುಗಳನ್ನು ಮರದ ಪೆಟ್ಟಿಗೆಯಲ್ಲಿರಿಸಿ ಬೀಗ ಹಾಕಿ ಸಮೀಪದಲ್ಲಿರಿಸಿದ್ದರು. ನಿನ್ನೆ ಮುಂಜಾನೆ ಎದ್ದು ನೋಡಿದಾಗ ಪೆಟ್ಟಿಗೆ ಅಲ್ಪ ದೂರದಲ್ಲಿ ಕಂಡುಬಂದಿದೆ . ಆದರೆ ಅದರ ಬೀಗ ಮುರಿದು ಹಣ ಕಳವು ನಡೆಸಲಾಗಿದೆ. ಈ ಬಗ್ಗೆ ನಿರ್ವಾಹಕ ಮಲ್ಲಿಕಾರ್ಜುನ ಹನ್ಸಾಲಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ನಿನ್ನೆ ಸಂಜೆ ಮಂದಿರದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮುಂಜಾನೆ 4 ಗಂಟೆ ವೇಳೆ ಓರ್ವ ವ್ಯಕ್ತಿ ಸಮೀಪದಲ್ಲಿ ನಡೆದುಹೋಗುತ್ತಿರುವುದು ಕಂಡು ಬಂದಿದೆ. ಆದರೆ ಆತನ ಗುರುತು ಹಚ್ಚ ಲಾಗಿಲ್ಲ. ತನಿಖೆ ಮುಂದುವರಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.