ನಿಲಯ್ಕಲ್‌ನಲ್ಲಿ ಶಬರಿಮಲೆ ತೀರ್ಥಾಟಕರ ವಾಹನ ಮಗುಚಿ ೧೩ ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ಶಬರಿಮಲೆ: ಶಬರಿಮಲೆ ಕ್ಷೇತ್ರ ದರ್ಶನ ನಡೆಸಿ ಹಿಂತಿರುಗುತ್ತಿದ್ದ ತೀರ್ಥಾಟಕ ಮಿನಿ ಬಸ್ ನಿಲಯ್ಕಲ್ ವಾಹನ ಪಾರ್ಕಿಂಗ್ ಗ್ರೌಂಡ್‌ನಿಂದ ಇಳಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅದರಲ್ಲಿದ್ದ ತಮಿಳುನಾಡಿನ ೧೩ ತೀರ್ಥಾಟಕರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಕೋಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು ನಾಲ್ಕೂವರೆ ಗಂಟೆ ವೇಳೆ ಈ ಘಟನೆ ನಡೆದಿದೆ.
ಶಬರಿಮಲೆಯಲ್ಲಿ ಮಂಡಲ ಪೂಜಾದಿನ ಸಮೀಪಿಸುತ್ತಿರುವಂತೆಯೇ, ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿರುವ ತೀರ್ಥಾಟಕರ ಸಂಖ್ಯೆ ದಾಖಲೆ ಮೀರತೊಡಗಿದೆ.
ನಿನ್ನೆ ಮಾತ್ರವಾಗಿ ಶಬರಿಮಲೆ ಕ್ಷೇತ್ರದಲ್ಲಿ ೧೦೦೯೬೯ ಮಂದಿ ಹದಿನೆಂಟು ಮೆಟ್ಟಲೇರಿ ಶ್ರೀ ದೇವರ ದರ್ಶನ ನಡೆಸಿ ಕೃತಾರ್ಥರಾಗಿದ್ದಾರೆ. ಪುಲ್‌ಮೇಡ್ ಕಾನನ ಹಾದಿ ಮೂಲಕ ಮಾತ್ರವಾಗಿ ನಿನ್ನೆ ೫೭೯೮ ತೀರ್ಥಾಟಕರು ಶಬರಿಮಲೆಗೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ೬ ಗಂಟೆ ತನಕ ೨೩೧೬೭ ಮಂದಿ ಕ್ಷೇತ್ರ ದರ್ಶನ ನಡೆಸಿದರು. ಭಾರೀ ಸಂಖ್ಯೆಯಲ್ಲಿ ಭಕ್ತಜನಪ್ರವಾಹವೇ ಶಬರಿಮಲೆಗೆ ಹರಿದು ಬರುತ್ತಿರುವುದರಿಂದಾಗಿ ಪಂಪಾದಿಂದ ಸನ್ನಿಧಾನಕ್ಕೆ ತಲುಪಲು ಸಾಲಿನಲ್ಲಿ ೧೬ ತಾಸುಗಳ ತನಕ ನಿಂತು ಕಾಯಬೇಕಾದ ಸಂಕಷ್ಟದ ಸ್ಥಿತಿಯೂ ಭಕ್ತರಿಗೆ ಉಂಟಾಗಿದೆ.
ಇದರಿಂದಾಗಿ ಶಬರಿಮಲೆ ಮತ್ತು ಪರಿಸರದಲ್ಲಿ ವಿಶೇಷ ರೀತಿಯ ವಾಹನ ನಿಯಂತ್ರಣವನ್ನುಏರ್ಪಡಿಸಲಾಗಿದೆ. ತೀರ್ಥಾಟಕರ ಸಂಖ್ಯೆ ಮಿತಿಮೀರುತ್ತಿರುವಂತೆಯೇ ಇಲ್ಲಿ ಅಗತ್ಯದ ಕುಡಿಯುವ ನೀರಿನ ಮತ್ತು ಇತರ ಸೌಕರ್ಯಗಳು ಲಭಿಸದ ಸ್ಥಿತಿಯೂ ನಿರ್ಮಾಣವಾಗಿದೆ. ಇದು ತೀರ್ಥಾಟಕರನ್ನು ಇನ್ನಷ್ಟು ತೀವ್ರ ಸಂಕಷ್ಟಕ್ಕೊಳಪಡಿಸಿದ್ದು, ಆ ಬಗ್ಗೆ ತೀರ್ಥಾಟಕರೇ ಪ್ರತ್ಯಕ್ಷವಾಗಿ ದೂರು ಮತ್ತು ಪ್ರತಿಭಟನೆಗಳೊಂದಿಗೆ ರಂಗಕ್ಕಿಳಿದಿದ್ದಾರೆ.