ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಾಣಕ್ಕೆ ಕ್ರಮವಿಲ್ಲ: ಕ್ರಿಯಾಸಮಿತಿಯಿಂದ ಮತ್ತೆ ಚಳವಳಿ
ಕಾಸರಗೋಡು: ನಗರದ ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಲೇಬೇಕೆಂಬ ಬೇಡಿಕೆಯೊಂದಿಗೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮತ್ತೆ ಚಳವಳಿಗೆ ಚಾಲನೆ ನೀಡಲಾಗಿದೆ. ಇಂದು ಬೆಳಿಗ್ಗೆ ನುಳ್ಳಿಪ್ಪಾಡಿಯಲ್ಲಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಾಗರಿಕರು ಜಮಾಯಿಸಿದ್ದು, ತಮ್ಮ ಬೇಡಿಕೆಯನ್ನು ಮತ್ತೆ ಅಧಿಕಾರಿಗಳ ಮುಂದಿರಿಸಿದ್ದಾರೆ.
9 ತಿಂಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಲಾಗಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೌಕರ್ಯವಾಗುವ ರೀತಿಯಲ್ಲಿ ಕಾಮಗಾರಿ ನಡೆಸುವುದಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಹೊಣೆಗಾರಿಕೆ ವಹಿಸಿಕೊಂಡ ಸಂಸ್ಥೆಯ ಸಂಬಂಧ ಪಟ್ಟವರು ತಿಳಿಸಿದ್ದರು. ಆದರೆ ಇದುವರೆಗೂ ಇಲ್ಲಿ ಅಂಡರ್ ಪ್ಯಾಸೇಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿಲ್ಲ. ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಅಂಡರ್ ಪ್ಯಾಸೇಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಇಂದು ಮತ್ತೆ ಕ್ರಿಯಾ ಸಮಿತಿ ಚಳವಳಿಗೆ ಚಾಲನೆ ನೀಡಿದೆ.
ಪ್ರಸ್ತುತ ಹೊಸ ಬಸ್ ನಿಲ್ದಾಣ ಬಿಟ್ಟರೆ ಅಂಡರ್ ಪ್ಯಾಸೇಜ್ ಇರುವುದು ಅಣಂಗೂರಿನಲ್ಲಾಗಿದೆ. ನುಳ್ಳಿಪ್ಪಾಡಿಯಲ್ಲಿರುವ ಖಾಸಗಿ ಆಸ್ಪತ್ರೆ, ಚೆನ್ನಿಕರ ಸ್ಮಶಾನ ಭಾಗಕ್ಕೆ ತೆರಳಬೇಕಾದರೆ ಇದೀಗ ಅಣಂಗೂರಿಗೆ ಹೋಗಿ ಅಲ್ಲಿಂದ ಮರಳಿ ಬರಬೇಕಾದ ಸ್ಥಿತಿ ಇದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ನುಳ್ಳಿಪ್ಪಾಡಿಯ ಆಸ್ಪತ್ರೆಗೆ ತಲುಪಿಸಬೇಕಾದಲ್ಲಿ ಇದು ಭಾರೀ ಸಮಸ್ಯೆ ಸೃಷ್ಟಿಸಲಿದೆ. ಹಾಗಿರುವಾಗ ಈ ಹಿಂದೆ ನೀಡಿದ ಭರವಸೆಯನ್ನು ಈಡೇರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಇಂದು ನಡೆಸಿದ ಚಳವಳಿಯನ್ನು ಕ್ರಿಯಾ ಸಮಿತಿ ಅಧ್ಯಕ್ಷ, ನಗರಸಭಾ ವಿರೋಧ ಪಕ್ಷ ನಾಯಕನಾದ ಪಿ. ರಮೇಶ್ ಉದ್ಘಾಟಿಸಿ ಮಾತನಾಡಿದರು. ಕನ್ವೀನರ್, ನಗರಸಭಾ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ, ಪದಾಧಿಕಾರಿ ಅನಿಲ್ ಚೆನ್ನಿಕರೆ, ಕೌನ್ಸಿಲರ್‌ಗಳಾದ ಲಲಿತ, ಶಾರದಾ ಮೊದಲಾದವರು ನೇತೃತ್ವ ನೀಡಿದರು.