ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
ಮಂಜೇಶ್ವರ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮೊರತ್ತಣೆ ಅಂಗನವಾಡಿ ಬಳಿಯ ನಿವಾಸಿ ದಿ| ಕೃಷ್ಣ ನಾಯ್ಕರ ಪುತ್ರ ರಾಜೇಶ್ (40)ರ ಮೃತದೇಹ ಹಿತ್ತಿಲ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೆಂಟ್ರಿಂಗ್ ಕಾರ್ಮಿಕರಾಗಿದ್ದರು. ಅಸೌಖ್ಯ ತಗಲಿ ಚೇತರಿಸಿಕೊಂಡಿದ್ದರು. ಅಂಗನವಾಡಿಯಲ್ಲಿ ಹೆಲ್ಪರ್ ಆಗಿರುವ ತಾಯಿ ಸರೋಜಿನಿ ನಿನ್ನೆ ಸಂಜೆ ಮನೆಗೆ ತಲುಪಿದಾಗ ಪುತ್ರ ಮನೆಯಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿನ ಶವಾಗಾರದಲ್ಲಿರಿಸಲಾಗಿದೆ. ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಿಲಿಸಿದ್ದಾರೆ. ಮೃತ ಯುವಕ ತಾಯಿ, ಪತ್ನಿ ಗೀತಾ, ಪುತ್ರಿ, ತನ್ಮಯಿ, ಸಹೋದರಿಯರಾದ ಜಯಮಾಲ, ಸವಿತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.