ಪಂಚಾಯತ್ ನೌಕರ ವಂಚನೆ ನಡೆಸಿದರೆ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಹೇಳುವುದು ಯಾವ ನ್ಯಾಯ- ಮುಸ್ಲಿಂ ಲೀಗ್
ಕುಂಬಳೆ: ಪಂಚಾಯತ್‌ನಲ್ಲಿ ನೌಕರ ಹಣ ವಂಚನೆ ನಡೆಸಿದರೆ ಪಂಚಾಯತ್ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಹೇಳುವುದು ಯಾವ ನ್ಯಾಯ ಎಂದು ಮುಸ್ಲಿಂಲೀಗ್ ಕುಂಬಳೆ ಪಂಚಾಯತ್ ಸಮಿತಿ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ. ಕುಂಬಳೆ ಪಂಚಾಯತ್‌ನಲ್ಲಿ ನೌಕರ ಲಕ್ಷಾಂತರ ರೂಪಾಯಿಗಳ ವಂಚನೆ ನಡೆಸಿದನೆಂಬ ಕಾರಣದಿಂದ ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಹೇಳುವ ಬಿಜೆಪಿಯವರು ಆ ಪಕ್ಷದವರು ಆಡಳಿತ ನಡೆಸುವ ಮಧೂರು ಪಂಚಾಯತ್‌ನಲ್ಲಿ ನೌಕರನೋರ್ವ ಎಂಟೂವರೆ ಲಕ್ಷ ರೂಪಾಯಿಗಳ ವಂಚನೆ ನಡೆಸಿದಾಗ ಅಧ್ಯಕ್ಷ ರಾಜೀನಾಮೆ ನೀಡುವಂತೆ ತಿಳಿಸಿದ್ದಾರೆಯೇ ಎಂದು ಮುಸ್ಲಿಂ ಲೀಗ್ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಕಳೆದ ಲೋಕಸಭಾ ಚುನಾ ವಣೆಯಲ್ಲಿ ಕುಂಬಳೆ ಸಹಿತ ವಿವಿಧೆಡೆ ಉಂಟಾದ ಮತ ಸೋರಿಕೆಯನ್ನು ಮರೆಮಾಚಲು ಕುಂಬಳೆಯಲ್ಲಿ ಅವರು ಪ್ರಯತ್ನಿಸುತ್ತಿದ್ದಾರೆಂದೂ ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಎಂ. ಅಬ್ಬಾಸ್, ಮಂಡಲ ಸೆಕ್ರೆಟರಿ ಎ.ಕೆ. ಆರಿಫ್, ಬಿ.ಎನ್. ಮುಹಮ್ಮದಲಿ, ಯೂಸಫ್ ಉಳುವಾರು, ಗಫೂರ್ ಎರಿಯಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕುಂಬಳೆ ಪಂಚಾಯತ್ ಫಂಡ್‌ನಿಂದ ಹಣ ಲಪಟಾಯಿಸಿದ ಅಕೌಂಟೆಂಟ್‌ನನ್ನು ಸಂರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆಯೆಂದೂ ಅವರು ಆರೋಪಿಸಿದರು. ಅಕೌಂಟೆಂಟ್ ಬಿಜೆಪಿಯವರ ಗೆಳೆಯನಾಗಿದ್ದಾನೆಂದೂ ಲೀಗ್ ನೇತಾರರು ತಿಳಿಸಿದ್ದಾರೆ. ರಾಜ್ಯದ ಹಲವು ಪಂಚಾಯತ್‌ಗಳಲ್ಲಿ ನೌಕರರಿಂದ ವಂಚನೆ ನಡೆಯುತ್ತಿದೆ. ಅದಕ್ಕೆಲ್ಲ ಪಂಚಾಯತ್ ಅಧ್ಯಕ್ಷರು ರಾಜೀನಾಮೆ ನೀಡಿದರೆ ಕೇರಳದ ಪಂಚಾಯತ್‌ಗಳ ಅವಸ್ಥೆ ಏನಾಗಿರಬಹುದೆಂದೂ ಅವರು ಪ್ರಶ್ನಿಸಿದ್ದಾರೆ.