ಪಂಚಾಯತ್ ಸದಸ್ಯೆ ರಸ್ತೆ ಬದಿ ಕುಸಿದು ಬಿದ್ದು ಸಾವು
ಕಾಸರಗೋಡು: ಗ್ರಾಮ ಪಂಚಾಯತ್ ಸದಸ್ಯೆ ರಸ್ತೆ ಬದಿ ಕುಸಿದು ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ನ ಮೂರನೇ ವಾರ್ಡ್ ಸದಸ್ಯೆ, ಮೂಲತಃ ವಿದ್ಯಾನಗರ ಕೋಪ ನಿವಾಸಿ ಹಾಗೂ ಈಗ ಮೊಗ್ರಾಲ್ ಪುತ್ತೂರು ಮೊಗರಿನಲ್ಲಿ ವಾಸಿಸುತ್ತಿರುವ ಪಿ. ಪುಷ್ಪ(೪೩) ಸಾವನ್ನಪ್ಪಿದ ಮಹಿಳೆ. ಇವರು ಮುಸ್ಲಿಂ ಲೀಗ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಮೂರನೇ ವಾರ್ಡ್‌ನಲ್ಲಿ ಗೆದ್ದು ಪಂಚಾಯತ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದರು.
ಇವರು ಬಳ್ಳೂರು ಕೋಟೆ ಕುಂಜ ಚೆನ್ಯಾಕುಳದ ಕ್ವಾರ್ಟರ್ಸ್ ಬಳಿ ನಿನ್ನೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಕಂಡ ಊರವರು ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಪುಷ್ಪ ಅಸೌಖ್ಯದಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷದಿಂದ ಚಿಕಿತ್ಸೆ ಪಡೆ ಯುತ್ತಿದ್ದರೆಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತರು ಪತಿ ಮಾಧವ, ಮಕ್ಕಳಾದ ಶರತ್, ಸೌಮಿನಿ, ಸ್ವರಾಜ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.