ಪಚ್ಚಂಬಳದಲ್ಲಿ ಮನೆ ಕಳವು ಆರೋಪಿ ಗಂಟೆಗಳೊಳಗೆ ಸೆರೆ
ಕುಂಬಳೆ: ಪಚ್ಚಂಬಳದಲ್ಲಿ ಮನೆ ಕಳವು ನಡೆಸಿದ ಆರೋಪಿಯನ್ನು ಕೆಲವೇ ಗಂಟೆಗಳೊಳಗೆ ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಪಚ್ಚಂಬಳ ನಿವಾಸಿಯಾದ ಮುರ್ಶಿದ್ (19) ಎಂಬಾತ ಬಂಧಿತ ಆರೋಪಿ ಯೆಂದು ಪೊಲೀಸರು ತಿಳಿಸಿದ್ದಾರೆ.
ಪಚ್ಚಂಬಳದ ಅಬ್ದುಲ್ ಮಜೀದ್ ಎಂಬವರ ಮನೆಯಿಂದ ಮೊನ್ನೆ ರಾತ್ರಿ 29,700 ರೂಪಾಯಿ ಕಳವು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮುರ್ಶಿದ್ನನ್ನು ಸೆರೆ ಹಿಡಿಯಲಾಗಿದೆ.
ಮೊನ್ನೆ ರಾತ್ರಿ ಕುಟುಂಬ ಮನೆಯ ಕೆಳ ಅಂತಸ್ತಿನಲ್ಲಿ ನಿದ್ರಿಸಿದ್ದಾಗ ಮನೆಯ ಮೇಲಂತಸ್ತಿಗೆ ಏಣಿಯ ಸಹಾಯದಿಂದ ಹತ್ತಿದ ಆರೋಪಿ ಅಲ್ಲಿನ ಬಾಗಿಲು ಮುರಿದು ಒಳ ನುಗ್ಗಿ ಕೊಠಡಿಯೊಳಗಿದ್ದ ಕಪಾಟಿನಿಂದ ಹಣ ಕಳವು ನಡೆಸಿದ್ದನು. ಕಳವು ನಡೆದ ಬಗ್ಗೆ ಅಬ್ದುಲ್ ಮಜೀದ್ ನಿನ್ನೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ. ಶ್ರೀಜೇಶ್ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ನಿನ್ನೆ ಸಂಜೆ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.