ಪೆರಡಾಲ ಜಿಎಚ್‌ಎಸ್‌ಗೆ ಹೊಸ ಕಟ್ಟಡ ನಿರ್ಮಿಸಲು ಹಳೇ ಕಟ್ಟಡ ತೆರವು ಕಾರ್ಯ ಆರಂಭ
ಬದಿಯಡ್ಕ: ಪೆರಡಾಲ ಜಿಎಚ್‌ಎಸ್‌ಗೆ ನೂತನ ಕಟ್ಟಡ ನಿರ್ಮಿಸುವುದರಂಗವಾಗಿ ಹಳೆಯ ಕಟ್ಟಡವಾದ ಗಾಂಧಿ ಹಾಲ್‌ನ್ನು ಮುರಿದು ತೆಗೆಯಲಾಗುತ್ತಿದೆ. ೬೨ ವರ್ಷದ ಹಿಂದೆ ನಿರ್ಮಿಸಿದ ಈ ಕಟ್ಟಡವನ್ನು ಮುರಿದು ತೆರವುಗೊಳಿಸಲಾಗುತ್ತಿದೆ. ಬದಿಯಡ್ಕದ ವಿವಿಧ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಈ ಹಾಲ್‌ನಲ್ಲಿ ಪಂಚಾಯತ್‌ನ ವಿವಿಧ ಕ್ಲಬ್‌ಗಳು, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳು, ಕುಟುಂಬಶ್ರೀ, ಅಧ್ಯಾಪಕ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಶಾಲೆಗೆ ನೂತನ ದ್ವಿ ಮಹಡಿ ಕಟ್ಟಡ ನಿರ್ಮಿಸಿ ತರಗತಿಗಳನ್ನು ಆರಂಭಿಸಿದ ಬಳಿಕವೂ ಈ ಕಟ್ಟಡವನ್ನು ಮುರಿದಿರಲಿಲ್ಲ. ಶಾಲೆಯ ಇತರ ಸ್ಥಳಗಳಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಿಸಿಯೂ ತರಗತಿ ಕೊಠಡಿಗಳಿಗೆ ಸ್ಥಳಾವಕಾಶ ಇಲ್ಲದ ಕಾರಣ ಹೆಂಚು ಹಾಕಿದ ಗಾಂಧಿ ಹಾಲ್‌ನ್ನು ಈಗ ಮುರಿದು ತೆಗೆಯಬೇಕಾಗಿ ಬಂದಿದೆ. ಈಗ ಇಲ್ಲಿ ಕನ್ನಡ, ಮಲೆಯಾಳ, ಇಂಗ್ಲಿಷ್ ಮಾಧ್ಯಮಗಳಲ್ಲಾಗಿ ೧೪೫೦ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ.
೧೬ ತರಗತಿ ಕೊಠಡಿಗಳಿರುವ ಸಯನ್ಸ್ ಲ್ಯಾಬ್ ಹಾಲ್ ಸಹಿತದ ಮೂರು ಮಹಡಿ ಕಟ್ಟಡವನ್ನು ನಿರ್ಮಿಸಲು ೩.೯೦ ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಕಿಲ ಇದರ ಪ್ರೊಜೆಕ್ಟ್ ಜ್ಯಾರಿಗೊಳಿಸಲಿದೆ. ೧೯೨೫ರಲ್ಲಿ ಮುಂಡ್ಯತ್ತಡ್ಕ ದೇವರಮೆಟ್ಟುನಲ್ಲಿ ಸರಸ್ವತಿ ಸ್ಕೂಲ್ ಆಫ್ ಎಲಿಮೆಂಟರಿ ಎಜ್ಯುಕೇಶನ್ ಎಂಬ ಹೆಸರಲ್ಲಿ ಶಾಲೆ ಆರಂಭಗೊಂಡಿತ್ತು. ಬಳಿಕ ಪೇಟೆಯ ಸೌಕರ್ಯಯುತ ಕಟ್ಟಡಕ್ಕೆ ಬದಲಿಸಲಾಗಿತ್ತು. ಈಗ ಬದಿಯಡ್ಕ ಪೇಟೆಯ ಸರಕಾರಿ ಸ್ಥಳದಲ್ಲಿ ಶಾಲೆ ಕಾರ್ಯಾಚರಿಸುತ್ತಿದೆ. ೨೦೧೦ರಲ್ಲಿ ಈ ಶಾಲೆ ಹೈಸ್ಕೂಲ್ ಆಗಿ ಭಡ್ತಿಗೊಂಡಿತ್ತು. ೫೨ ತರಗತಿ ಕೊಠಡಿಗಳು ಶಾಲೆಗೆ ಬೇಕಾಗಿದ್ದು, ಪ್ರಸ್ತುತ ೪೫ ಕೊಠಡಿಗಳಲ್ಲಿ ಒತ್ತೊತ್ತಾಗಿ ಕುಳಿತು ಮಕ್ಕಳು ಕಲಿಯುತ್ತಿದ್ದಾರೆ. ಯುಪಿ ತರಗತಿಗಳಲ್ಲಿ ಹೆಚ್ಚು ಡಿವಿಶನ್‌ಗಳು ಇಲ್ಲಿದೆ. ಪ್ರತೀ ವರ್ಷವೂ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಾಗುತ್ತಿದ್ದರೂ ಮೂಲಭೂತ ಸೌಕರ್ಯದ ಕೊರತೆಯಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಬದಿಯಡ್ಕ ಪಂಚಾಯತ್‌ನ ಏಕ ಸರಕಾರಿ ಶಾಲೆಯಾಗಿದೆ ಇದು. ಬದಿಯಡ್ಕ, ಕುಂಬ್ಡಾಜೆ, ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳು ಇಲ್ಲಿ ಕಲಿಕೆಗಾಗಿ ತಲುಪುತ್ತಿದ್ದಾರೆ.