ಪೆರಿಯ ಅವಳಿ ಕೊಲೆ ಪ್ರಕರಣ ವಿಚಾರಣೆ ಪೂರ್ತಿ; ಮುಂದಿನ ತಿಂಗಳು ತೀರ್ಪು ಘೋಷಣೆ ಸಾಧ್ಯತೆ
ಕಾಸರಗೋಡು: ಪೆರಿಯ ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಕಡಿದು ಕೊಲೆಗೈದ ಪ್ರಕರಣದ ತೀರ್ಪು ಮುಂದಿನ ತಿಂಗಳು ಘೋಷಿಸುವ ಸಾಧ್ಯತೆ ಇದೆ. ಪ್ರಕರಣದ ವಿಚಾರಣೆ ಎರ್ನಾಕುಳಂ ಸಿಬಿಐ ನ್ಯಾಯಾಲಯದಲ್ಲಿ ಹೆಚ್ಚಿನಂಶ ಪೂರ್ತಿಗೊಂಡಿದೆ. ಈ ಮಧ್ಯೆ ಕಣ್ಣೂರು ಫಾರೆನ್ಸಿಕ್ ಲ್ಯಾಬ್ ಅಸಿಸ್ಟೆಂಟ್ ಡೈರೆಕ್ಟರ್ ಅಜೇಶ್ ಕೈದಕ್ಕಾಡ್‌ರನ್ನು ಪುನರ್ ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಪ್ರೋಸಿಕ್ಯೂಶನ್ ಮುಂದಿಟ್ಟಿದೆ. ಅವಳಿ ಕೊಲೆಗೆ ಉಪಯೋಗಿಸಿದ ಆಯುಧಗಳು ಸಹಿತವಿರುವ ಸಾಮಗ್ರಿಗಳನ್ನು ರಾಸಾಯನಿಕ ತಪಾಸಣೆ ನಡೆಸಿರುವುದು ಅಜೇಶ್ರ ನೇತೃತ್ವದಲ್ಲಾಗಿದೆ. ತಪಾಸಣೆ ಸಂಬಂಧಿಸಿದ ಕೆಲವು ವಿಷಯಗಳಲ್ಲಿ ಇನ್ನಷ್ಟು ಹೆಚ್ಚು ಸ್ಪಷ್ಟತೆಗಾಗಿ ಪುನರ್ ವಿಚಾರಣೆ ಬೇಕೆಂಬ ಬೇಡಿಕೆಯನ್ನು ಪ್ರೋಸಿಕ್ಯೂಶನ್ ಮುಂದಿಟ್ಟಿರುವುದು. ಪುನರ್ ವಿಚಾರಣೆ ಪೂರ್ತಿಯಾಗುವು ದರೊಂದಿಗೆ ಪ್ರಕರಣದ ಕ್ರಮಗಳನ್ನು ಪೂರ್ತಿಗೊಳಿಸಿ ತೀರ್ಪು ನೀಡುವುದಕ್ಕಿರುವ ದಿನಾಂಕವನ್ನು ನ್ಯಾಯಾಲಯ ಘೋಷಿಸಲಿದೆ. ನವೆಂಬರ್ ೧೩ರಂದು ವಯನಾಡ್ ಲೋಕಸಭಾ ಮಂಡಲಕ್ಕೆ ಹಾಗೂ ಪಾಲಕ್ಕಾಡ್, ಚೇಲಕ್ಕರ ವಿಧಾನಸಭಾ ಮಂಡಲಗಳಿಗೆ ಉಪ ಚುನಾವಣೆ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ತೀರ್ಪು ಪ್ರಕಟಗೊಂಡು ಆರೋಪಿಗಳಿಗೆ ಶಿಕ್ಷೆ ಲಭಿಸಿದರೆ ಅದು ಸಿಪಿಎಂಗೆ ದೊಡ್ಡ ಹೊಡೆತ ಉಂಟುಮಾಡಬಹುದೆಂದು ನಿರೀಕ್ಷಿಸಲಾಗಿದೆ.
2019 ಫೆಬ್ರವರಿ 17ರಂದು ರಾತ್ರಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಧ್ಯೆ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾತ್, ಕೃಪೇಶ್‌ರನ್ನು ತಡೆದು ನಿಲ್ಲಿಸಿ ಕಡಿದು ಕೊಲೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 24 ಆರೋಪಿಗಳಿದ್ದಾರೆ. ಇವರಲ್ಲಿ 16 ಮಂದಿ ಈಗಲೂ ಜೈಲಿನಲ್ಲಿ ಕಳೆಯುತ್ತಿದ್ದಾರೆ. ಸಿಬಿಐ ಈ ಪ್ರಕರಣವನ್ನು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿತ್ತು.