ಪೆರುವಾಡ್ ಕಡಪ್ಪುರದಲ್ಲಿ ತೀವ್ರಗೊಂಡ ಕಡಲ್ಕೊರೆತ : ತಡೆಗೋಡೆ ಸಮುದ್ರಪಾಲು; ಹಲವು ಕುಟುಂಬಗಳು ಆತಂಕದಲ್ಲಿ
ಕುಂಬಳೆ: ಮಳೆ ತೀವ್ರಗೊಳ್ಳುವುದರೊಂದಿಗೆ ಪೆರುವಾಡ್ ಕಡಪ್ಪುರದ ನಿವಾಸಿಗಳು ಆತಂಕದಿಂದ ದಿನ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಪ್ರತೀ ವರ್ಷ ಮಳೆಗಾಲ ಸಮೀಪಿಸುವುದರೊಂದಿಗೆ ಸಮುದ್ರಕ್ಕೆ ಹೆದರಿ ಜೀವಿಸಬೇಕಾದ ಸ್ಥಿತಿ ಇಲ್ಲಿನ ಮೀನು ಕಾರ್ಮಿಕರದ್ದಾಗಿದೆ. ಅತೀ ತೀವ್ರಗೊಳ್ಳುವ ಕಡಲ್ಕೊರೆತವೇ ಇಲ್ಲಿನ ಜನರಲ್ಲಿ ಭಯ ಹುಟ್ಟಿಕೊಳ್ಳಲು ಕಾರಣವಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ತೀವ್ರ ಕಡಲ್ಕೊರೆತವನ್ನು ತಡೆಯಲು ಇಲ್ಲಿ ನಿರ್ಮಿಸಿದ ತಡೆಗೋಡೆಗೆ ಸಾಧ್ಯವಾಗಿರಲಿಲ್ಲ. ತಡೆಗೋಡೆಗಳೆಲ್ಲಾ ಸಮುದ್ರಪಾಲಾಗಿದೆ. ಬಾಕಿ ಉಳಿದಿದ್ದ ತಡೆಗೋಡೆಯನ್ನು ಕೂಡಾ ಈಗ ಸಮುದ್ರ ತನ್ನತ್ತ ಸೆಳೆಯುತ್ತಿದೆ. ಕಳೆದ ವರ್ಷ ಸಮುದ್ರ ೨೦೦ ಮೀಟರ್‌ನಷ್ಟು ದಡವನ್ನು ಆಕ್ರಮಿಸಿದಾಗ ಹಲವು ಕುಟುಂಬಗಳಿಗೆ ಭಾರೀ ನಾಶನಷ್ಟ ಉಂಟಾಗಿತ್ತು. ಹಲವು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿ ಬಂದಿತ್ತು. ತೆಂಗಿನ ಮರಗಳು ಬುಡ ಸಮೇತ ಮಗುಚಿ ಬಿದ್ದಿದ್ದವು. ಇದರಿಂದಾಗಿ ಇಲ್ಲಿ ಭಾರೀ ಪ್ರಮಾಣದ ನಾಶನಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ಸ್ವಲ್ಪ ಭಾಗದಲ್ಲಿ ಪ್ರಯೋಗಾರ್ಥವಾಗಿ ಜಿಯೋ ಬ್ಯಾಗ್ ಉಪಯೋಗಿಸಿ ತಡೆಗೋಡೆ ನಿರ್ಮಿಸಲಾಗಿದ್ದರೂ ತೀವ್ರವಾದ ಕಡಲ್ಕೊರೆತ ಈ ಗೋಡೆಗೆ ಬೆದರಿಕೆಯಾಗಿ ಪರಿಣಮಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಮಳೆ ತೀವ್ರಗೊಳ್ಳು ವುದರೊಂದಿಗೆ ಇಲ್ಲಿ ಕಡಲ್ಕೊರೆತ ಇನ್ನಷ್ಟು ತೀವ್ರಗೊಳ್ಳಲಿದೆ. ಸಮುದ್ರದ ಅಲೆಗಳು ತಡೆಗೋಡೆಯನ್ನು ದಾಟಿ ಕರಾವಳಿ ರಸ್ತೆಗೆ ತಲುಪಬಹುದೆಂಬ ಭಯ ಇಲ್ಲಿನ ಜನರನ್ನು ಕಾಡುತ್ತಿದೆ.