ಪೈವಳಿಕೆಯಲ್ಲಿ ದಸರಾ ನಾಡಹಬ್ಬ; ಪ್ರತಿಭಾ ಪುರಸ್ಕಾರ ‘ಕವಿಕಂಪನ’ ಪುಸ್ತಕ ಬಿಡುಗಡೆ

ಪೈವಳಿಕೆ: ಗಡಿನಾಡ ಕಲಾ ಸಂಘ ಪೈವಳಿಕೆ, ಡಾ. ಎಂ. ರಾಮ ಅಭಿನಂದನಾ ಟ್ರಸ್ಟ್‌ನ ಆಶ್ರಯದಲ್ಲಿ ದಸರಾ ನಾಡಹಬ್ಬ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೊಡ್ಲಮೊಗರು ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಅಧ್ಯಾಪಕ ಎ.ಬಿ. ರಾಧಾಕೃಷ್ಣ ಬಲ್ಲಾಳ್ ರಚಿಸಿದ ಕವನಸಂಕಲನ ‘ಕವಿ ಕಂಪನ’ವನ್ನು ಬಿಡುಗಡೆಗೊಳಿ ಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಟಿ.ಎ.ಎನ್ ಖಂಡಿಗೆ ಕೃತಿ ಬಿಡುಗಡೆಗೊಳಿಸಿದರು. ಕಮಲಾಕ್ಷಿ ಟೀಚರ್ ಪುಸ್ತಕ ಪರಿಚಯಿಸಿದರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ಉದ್ಘಾಟಿಸಿದರು. ಗಡಿನಾಡ ಕಲಾ ಸಂಘದ ಅಧ್ಯಕ್ಷ ಎ.ಬಿ. ರಾಧಾಕೃಷ್ಣ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜಾರಾಮ ಡಿ.ಕೆ., ಕೋಚಣ್ಣ ಶೆಟ್ಟಿ, ರಾಜೇಶ್ ಪಿ, ಅಬ್ದುಲ್ ರಹಿಮಾನ್ ಶುಭ ಹಾರೈಸಿದರು. ಶ್ರೀ ಕುಮಾರಿ ಕೆ. ಸ್ವಾಗತಿಸಿ, ಪಿ.ಎನ್. ಮೂಡಿತ್ತಾಯ ವಂದಿಸಿದರು. ಶೇಖರ ಶೆಟ್ಟಿ ಕೆ. ನಿರ್ವಹಿಸಿದರೆ, ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.

ಇದೇ ವೇಳೆ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೆ ನಿವೃತ್ತ ಮುಖ್ಯೋಪಾಧ್ಯಾಯ ದಿ| ರಾಘವ ಬಲ್ಲಾಳ್ ಸಿ.ಎಚ್.ರ ಸ್ಮರಣಾರ್ಥ ಅವರು ಮುಖ್ಯೋಪಾಧ್ಯಾಯರಾಗಿದ್ದ ಬೇಕೂರು ಶಾಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page