ಪೈವಳಿಕೆಯ ಒಂದೇ ಕುಟುಂಬದ ನಾಲ್ವರನ್ನು ಕೊಲೆಗೈದ ಪ್ರಕರಣ: ತೀರ್ಪು ಫೆ. ೨೭ರಂದು
ಕಾಸರಗೋಡು: ಪೈವಳಿಕೆಯಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಕಡಿದು ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲ ಯ (೩)ರಲ್ಲಿ ಪೂರ್ಣಗೊಂಡಿದ್ದು, ಇದರ ತೀರ್ಪನ್ನು ನ್ಯಾಯಾಲಯ ಫೆಬ್ರವರಿ ೨೭ಕ್ಕೆ ಮೀಸಲಿರಿಸಿದೆ. ಪೈವಳಿಕೆ ಸುದೆಂಬಳದ ರೇವತಿ (೬೦), ಇವರ ಸಹೋದರರಾದ ವಿಠಲ (೭೫), ಬಾಬು (೬೮) ಮತ್ತು ಸದಾಶಿವ (೫೦) ಎಂಬವರನ್ನು ಕೊಲೆಗೈದ ಪ್ರಕರಣವಾಗಿದೆ ಇದು. ಸುದೆಂಬಳದ ಉದಯ (೪೫) ಈ ಕೊಲೆ ಪ್ರಕರಣದ ಆರೋಪಿಯಾ ಗಿದ್ದಾನೆ. ೨೦೨೦ ಅಗೋಸ್ತ್ ೩ರಂದು ಸಂಜೆ ಈ ಸಾಮೂಹಿಕ ಕೊಲೆ ಪ್ರಕರಣ ನಡೆದಿತ್ತು. ಆರೋಪಿ ಉದಯ ತನ್ನ ತಾಯಿ ಲಕ್ಷ್ಮಿ ಜತೆ ವಾಸಿಸುತ್ತಿದ್ದನು. ಕೌಟುಂಬಿಕ ಸಮಸ್ಯೆಯ ಹೆಸರಲ್ಲಿ ಕುಪಿತಗೊಂಡ ಆರೋಪಿ ಉದಯ ಕೊಡಲಿಯಿಂದ ಕಡಿದು ಈ ನಾಲ್ಕು ಮಂದಿಯನ್ನು ಕೊಲೆಗೈದಿದ್ದನೆಂದು ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ತಿಳಿಸಿದ್ದರು. ಕೊಲೆ ನಡೆಯುವ ವೇಳೆ ಆರೋಪಿ ತನ್ನ ತಾಯಿ ಲಕ್ಷ್ಮಿಯನ್ನೂ ಕಡಿಯಲೆತ್ನಿಸಿದ್ದನೆಂದೂ ಆಗ ಆಕೆ ಪ್ರಾಣ ರಕ್ಷಣಾರ್ಥ ಅಲ್ಲಿಂದ ಓಡಿ ಪ್ರಾಣ ಉಳಿಸಿಕೊಂಡಿ ದ್ದಳೆಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಕೊಲೆಗೀಡಾಗಿದ್ದವರ ಪೈಕಿ ವಿಠಲ, ಬಾಬು ಮತ್ತು ಸದಾಶಿವ ಎಂಬವರು ಆರೋಪಿ ಉದಯನ ಮಾವಂದಿರಾಗಿದ್ದಾರೆ (ತಾಯಿಯ ಸಹೋದರರು) ಮತ್ತು ರೇವತಿ ಆರೋಪಿ ಉದಯ ಚಿಕ್ಕಮ್ಮ (ತಾಯಿಯ ಸಹೋದರಿ).