ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನ ನಕಲಿ ನ್ಯಾಯಾಧೀಶ ಸೆರೆ

ಕಾಸರಗೋಡು: ನ್ಯಾಯಾಧೀಶ ಎಂದು ನಂಬಿಸಿ ಪೊಲೀಸರನ್ನು ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ ಹಲವು ಪ್ರಕರಣಗಳ ಆರೋಪಿಯಾಗಿರುವ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರ ತೇನ್ನಲ ನಿವಾಸಿ ಶಮ್ನಾದ್ (೪೨) ಈ ರೀತಿ ಬಂಧಿತನಾದ ನಕಲಿ ನ್ಯಾಯಾಧೀಶ. ನೀಲೇಶ್ವರ ಪೊಲೀಸ್ ಠಾಣೆಗೆ ನಿನ್ನೆ ರಾತ್ರಿ ಸುಮಾರು ೧೦.೩೦ರ ವೇಳೆಗೆ ಪೊಲೀಸ್ ಇಲಾಖೆಯ ಡಿ.ಸಿ.ಆರ್.ಬಿ ವಿಭಾಗ ದಿಂದ ಇದು ಕರೆಯುತ್ತಿರುವುದಾಗಿ ಹೇಳಿ ಫೋನ್ ಕರೆ ಬಂದಿದೆ.

ಪತ್ತನಂತಿಟ್ಟದ ನ್ಯಾಯಾಧೀಶ ತಮ್ಮ ಕಾರು ದಾರಿಯಲ್ಲಿ ಕೈಕೊಟ್ಟು ಅವರು ರಸ್ತೆಯಲ್ಲೇ ಉಳಿದು ಕೊಂಡಿದ್ದಾರೆ. ರಾತ್ರಿ ಉಳಿದುಕೊಳ್ಳಲು ಅವರಿಗೆ ಅಗತ್ಯದ ವಸತಿ ಸೌಕರ್ಯ ಏರ್ಪಡಿಸುವಂತೆ ಫೋನಿನಲ್ಲಿ ತಿಳಿಸಲಾಗಿದೆ. ಅದರಂತೆ ಪೊಲೀಸರು ನೀಲೇಶ್ವರ ರಾಷ್ಟ್ರೀಯ ಹೆದ್ದಾರಿ ಬಳಿ ಹೋದಾಗ ಅಲ್ಲಿ ಕಾರಿನ ಬಳಿ ಓರ್ವ ವ್ಯಕ್ತಿ ನಿಂತಿರುವುದನ್ನು ಕಂಡಿದ್ದಾರೆ. ಆಗ ತಾನು ಪತ್ತನಂತಿಟ್ಟ ಮೆಜಿಸ್ಟ್ರೇಟ್ ಆಗಿದ್ದೇನೆ. ದಾರಿ ಮಧ್ಯೆ ನನ್ನ ಕಾರು ಕೆಟ್ಟು ಹೋಗಿದೆ. ರಾತ್ರಿ ತಂಗಲು ತನಗೆ ವಸತಿಗೃಹ ವ್ಯವಸ್ಥೆ ಏರ್ಪ ಡಿಸಿಕೊಡುವಂತೆ ಆತ ಪೊಲೀಸರಲ್ಲಿ ತಿಳಿಸಿದ್ದಾನೆ. ಅದರಂತೆ ಪೊಲೀಸರು ಆತನನ್ನು  ಒಳ್ಳೆ ಸೌಕರ್ಯ ಹೊಂದಿರುವ ವಸತಿಗೃಹಕ್ಕೆ ಸಾಗಿಸಿದ್ದಾರೆ. ಅಲ್ಲಿ ತಲುಪಿದ ಕೆಲವೇ ನಿಮಿಷದಲ್ಲಿ ನನಗೆ ಇಲ್ಲಿ ಉಳಕೊಳ್ಳಲು ಸಾಧ್ಯ ವಾಗದು, ನನ್ನನ್ನು ಕಣ್ಣೂರು ರೈಲು ನಿಲ್ದಾಣಕ್ಕೆ ಸಾಗಿಸಬೇಕು. ಅದಕ್ಕಾಗಿ ನನಗೆ ಕಾರಿನ ವ್ಯವಸ್ಥೆ ಮಾಡಿಕೊಡುವಂತೆ ಆತ ಪೊಲೀಸರಲ್ಲಿ ತಿಳಿಸಿದನು. ಕಣ್ಣೂರಿಗೆ ಸಾಗಿಸಲು ಸಾಧ್ಯವಾಗದು, ಹೊಸದುರ್ಗ ರೈಲು ನಿಲ್ದಾಣಕ್ಕೆ ನಾವು ನಿಮ್ಮನ್ನು ತಲುಪಿಸುವೆವು ಎಂದು ಪೊಲೀಸರು ಆತನಲ್ಲಿ ತಿಳಿಸಿದ್ದಾರೆ. ಆಗ ಆತನ ವರ್ತನೆಯನ್ನು ಕಂಡು ಶಂಕೆಗೊಂಡ ಪೊಲೀಸರು ಆತನ ಗುರುತುಪತ್ರ (ಐಡಿ ಕಾರ್ಡ್) ತೋರಿಸುವಂತೆ ಆಗ್ರಹಪಟ್ಟರು. ಆತ ಅದನ್ನು ತೋರಿಸಲು ತಯಾರಾಗಲಿಲ್ಲ. ಅದರಿಂದ ಪೊಲೀಸರು ಇನ್ನಷ್ಟು ಶಂಕೆಗೊಂಡು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆ ವ್ಯಕ್ತಿ ತಿರುವನಂತಪುರ ಶಮ್ನಾದ್ ಆಗಿದ್ದಾನೆಂದು, ನಕಲಿ ನೋಟು ಸೇರಿದಂತೆ ಇತರ ಒಂಭತ್ತು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯಾಗಿರುವುದಾಗಿ ಪತ್ತೆ ಹಚ್ಚಿದ ಬಳಿಕ ಆತನನ್ನು ಅಲ್ಲಿಂದ ಸೆರೆ ಹಿಡಿದು ಪೊಲೀಸ್ ಠಾಣೆಗೆ ಒಯ್ದರು. ಮಾತ್ರವಲ್ಲ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page