ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ: ಬಂಧಿತ ಹೆಸರು ಬದಲಾಯಿಸಿ ಕಾಸರಗೋಡಿನಲ್ಲೂ ವಾಸಿಸಿ ಮಂಜೇಶ್ವರದ ಯುವತಿಯನ್ನು ಮದುವೆಯಾಗಿದ್ದ
ಎರ್ನಾಕುಳಂ: ೨೦೧೦ ಜುಲೈ ೪ರಂದು ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫರ ಕೈ ತುಂಡರಿಸಿದ ಪ್ರಕರಣದ ಪ್ರಧಾನ ಸೂತ್ರಧಾರ ನಿಷೇಧಿತ ಪೋಪ್ಯುಲರ್ ಫ್ರಂಟ್ ಕಾರ್ಯಕರ್ತ ಪೆರುಂಬಾವೂರು ಅಶವನ್ನೂರ್ ನುಲೇಲಿ ನಿವಾಸಿ ಮುಟ್ಟಶ್ಶೇರಿ ಸವಾದ್ (೩೮) ಈ ಹಿಂದೆ ಕಾಸರಗೋಡಿನಲ್ಲೂ ತಲೆಮರೆಸಿಕೊಂಡು ಜೀವಿಸಿದ್ದನೆಂದು ಆತನನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಮಾಹಿತಿ ಲಭಿಸಿದೆ.
ಬಂಧಿತನನ್ನು ಎನ್‌ಐಎ ಎರ್ನಾ ಕುಳಂನಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ಆತನನ್ನು ಜನವರಿ ೨೪ರ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಕೋಮು ಉದ್ದೇಶದಿಂದ ಪ್ರಾಧ್ಯಾಪಕನ ಕೈ ತುಂಡರಿಸಿದ ಘಟನೆ ನಡೆದ ೧೩ ವರ್ಷಗಳ ತನಕ ಆರೋಪಿ ಸವಾದ್ ವಿವಿಧೆಡೆಗಳಲ್ಲಿ ಹೆಸರು ಬದಲಾಯಿಸಿ ತಲೆಮರೆಸಿಕೊಂಡು ಜೀವಿಸುತ್ತಿದ್ದನು. ಕೊನೆಗೆ ಆತನನ್ನು ಮಟ್ಟನ್ನೂರಿನ ಪರಿಯಾರಂ ಬೇರತ್ತ್ ನಲ್ಲಿರುವ ಬಾಡಿಗೆ ಕ್ವಾರ್ಟರ್ಸ್‌ನಿಂದ ನಿನ್ನೆ ಮುಂಜಾನೆ ಆ ಕ್ವಾರ್ಟರ್ಸ್‌ನ್ನು ಸುತ್ತುವರಿದು ಬಂಧಿಸಿದ್ದರು.
ತಾನು ಕಾಸರಗೋಡು ನಿವಾಸಿಯಾಗಿರುವುದಾಗಿಯೂ ತನ್ನ ಹೆಸರು ಶಾಜಹಾನ್ ಆಗಿದೆ ಎಂದು ಆ ಪ್ರದೇಶದಲ್ಲಿದ್ದವರಿಗೆಲ್ಲಾ ತಿಳಿಸಿದ್ದನು. ಮಾತ್ರವಲ್ಲ ಅದೇ ಹೆಸರಲ್ಲಿ ಆತ ಕಾಸರಗೋಡು ಮಂಜೇಶ್ವರದ ತೂಮಿನಾಡಿನ ಯುವತಿಯೋರ್ವ ಳನ್ನು ಶಾಜಹಾನ್ ಎಂಬ ಹೆಸರಲ್ಲಿ ೮ ವರ್ಷಗಳ ಹಿಂದೆ ಮದುವೆಯಾಗಿದ್ದು, ಆ ದಾಂಪತ್ಯದಿಂದ ಆತ ಐದು ವರ್ಷ ಪ್ರಾಯ ಮತ್ತು ೯ ತಿಂಗಳ ಮಗುವನ್ನು ಹೊಂದಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ಮಟ್ಟನ್ನೂರಿನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಜೀವಿಸುತ್ತಿದ್ದ. ಅಲ್ಲಿ ಸಮೀಪದ ಕುರುಮಕ್ಕು ಎಂಬಲ್ಲಿ ಮರದ ಕೆಲಸದ ಕಾರ್ಮಿಕನಾಗಿ ಸೇರ್ಪಡೆಗೊಂಡಿದ್ದ. ಆತ ದೈನಂದಿನ ಆಟೋ ರಿಕ್ಷಾದಲ್ಲೇ ಕೆಲಸಕ್ಕೆ ಹೋಗಿ ಅದರಲ್ಲೇ ಮನೆಗೆ ಹಿಂತಿರುಗುತ್ತಿದ್ದನೆಂದು ಎನ್‌ಐಎ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆತ ಯಾರಲ್ಲೂ ಹೆಚ್ಚಿನ ನಂಟು ಹೊಂದಿರಲಿಲ್ಲ.
ತಲೆಮರೆಸಿಕೊಳ್ಳಲು ಸವಾದ್‌ನಿಗೆ ಸಹಾಯ ಒದಗಿಸಿದ ವ್ಯಕ್ತಿಗಳನ್ನು ಕೇಂದ್ರೀಕರಿಸಿ ಎನ್‌ಐಎ ಇನ್ನೊಂದೆಡೆ ಸಮಗ್ರ ತನಿಖೆ ಆರಂಭಿಸಿದೆ. ಇದರಿಂದಾಗಿ ಅದಕ್ಕೆ ಸಂಬಂಧಿಸಿ ಇನ್ನಷ್ಟು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ. ಸವಾದ್ ತಲೆಮರೆಸಿಕೊಂಡು ವಾಸಿಸುತ್ತಿದ್ದ ಮಟ್ಟನ್ನೂರಿನ ಕ್ವಾರ್ಟರ್ಸ್‌ನಿಂದ ಆತನ ಮೊಬೈಲ್ ಫೋನ್‌ನ ಹೊರತಾಗಿ ಇತರ ಎರಡು ಫೋನ್‌ಗಳು, ಸಿಮ್‌ಕಾರ್ಡ್‌ಗಳು ಮತ್ತು ಇತರ ಹಲವು ದಾಖಲು ಪತ್ರಗಳನ್ನು ಎನ್‌ಐಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಆ ಬಗ್ಗೆ ಪ್ರತ್ಯೇಕ ತನಿಖೆ ಆರಂಭಿಸಿದೆ.