ಪ್ರಿಯತಮನಿಗೆ ಕೀಟನಾಶಕ ಬೆರೆಸಿದ ಕಷಾಯ ನೀಡಿ ಕೊಲೆಗೈದ ಪ್ರಕರಣ: ವಿಷಕನ್ಯೆಗೆ ಗಲ್ಲು ಶಿಕ್ಷೆ; ಎಸ್.ಪಿ ಶಿಲ್ಪ ಮತ್ತು ಡಿವೈಎಸ್ಪಿ ಜೋನ್ಸನ್ ನೇತೃತ್ವದ ತಂಡಕ್ಕೆ ಲಭಿಸಿದ ಅಂಗೀಕಾರ
ಕಾಸರಗೋಡು: ತಿರುವನಂ ತಪುರ ಪಾರಶಾಲೆಯ ಮುರಿಯಾಂ ಕಾವು ಜೆ.ಪಿ. ಹೌಸ್‌ನ ನಿವಾಸಿ ಹಾಗೂ ಪದವಿ ವಿದ್ಯಾರ್ಥಿ ಶಾರೋನ್‌ರಾಜ್ (23)ನನ್ನು ವಿಷ ಬೆರೆಸಿದ ಕಷಾಯ ಕುಡಿಸಿ ಕೊಲೆಗೈದ ಪ್ರಕರಣದಲ್ಲಿ ಆರೋಪಿ ಕನ್ಯಾಕು ಮಾರಿ ಜಿಲ್ಲೆಯ ದೇವಿಯೋಡ್ ಪುಂಬಳ್ಳಿಕೋಣಂ ಶ್ರೀನಿಲಯದ ಗ್ರೀಷ್ಮಾ (24)ಳಿಗೆ ನೆಯ್ಯಾಟಿಂಗರ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾ ಲಯ ಗಲ್ಲು ಶಿಕ್ಷೆ ವಿಧಿಸಿ ದ ಅಪೂರ್ವಗಳಲ್ಲಿ ಅಪೂರ್ವ ತೀರ್ಪಿನ ಹಿರಿಮೆ ಪ್ರಸ್ತುತ ಪ್ರಕರಣದ ತನಿಖೆ ನಡೆಸಿದ ಅಂದು ತಿರುವನಂ ತಪುರ ರೂರಲ್ ಎಸ್ಪಿಯಾಗಿದ್ದು, ಈಗ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪಾ ಮತ್ತು ಅಂದು ತಿರುವನಂತಪುರ ರೂರಲ್ ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ಪಿಯಾ ಗಿದ್ದು, ಈಗ ಕಾಸರಗೋಡು ಜಿಲ್ಲಾ ಕ್ರೈಂ ರೆಕಾರ್ಡ್ಸ್ ಬ್ಯೂರೋ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿರುವ ಕೆ.ಜೆ. ಜೋನ್ಸನ್‌ರಿಗೆ ಸಂದಿದೆ. ಈ ತಂಡವೇ ಅಂದು ಶಾರೋನ್‌ರಾಜ್ ಕೊಲೆ ಪ್ರಕರಣದ ತನಿಖೆಯನ್ನು ಯಾವುದೇ ರೀತಿಯ ಕುಂದುಕೊರತೆಗಳಿಲ್ಲದೆ ಸಮಗ್ರವಾಗಿ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಆ ತನಿಖೆಗೆ ಲಭಿಸಿದ ಅಂಗೀಕಾರವಾಗಿದೆ ಈ ತೀರ್ಪು.
ಪ್ರಿಯತಮ ಶಾರೋನ್‌ನನ್ನು ಕೊಲೆಗೈಯ್ಯಲು ಆರೋಪಿ ಗ್ರೀಷ್ಮಾ ‘ಕಾಪಿಕ್’ ಎಂಬ ಕೀಟನಾಶಕ ಬಳಸಿದ್ದು, ಈ ಕೀಟನಾಶಕದ ಪರಿಣಾಮಗಳ ಕುರಿತಾದ ಸಮಗ್ರ ಮಾಹಿತಿಗಳನ್ನು ಆಕೆ ಇಂಟರ್‌ನೆಟ್ ಮೂಲಕ ಮನದಟ್ಟು ಮಾಡಿಕೊಂ ಡಿದ್ದಳು. ಕೃಷಿಗೆ ಬಳಸಲಾಗುವ ಈ ಕೀಟನಾಶಕವನ್ನು ಆಕೆಯ ಮಾವ ಮನೆಯಲ್ಲಿ ತಂದಿರಿಸಿದ್ದನು. ಅದರ ಪರಿಣಾಮ ಕುರಿತಾದ ಸಂಪೂರ್ಣ ಮಾಹಿತಿಗಳ ಬಗ್ಗೆ ಆಕೆ ಗೂಗಲ್ ಮೂಲಕ ಸರ್ಚ್ ನಡೆಸಿದ್ದಳು. ನಂತರ ಪ್ರಿಯತಮ ಶಾರೋನ್‌ನನ್ನು ತನ್ನ ಮನೆಗೆ 2022 ಅಕ್ಟೋಬರ್ 14ರಂದು ಉಪಾಯದಿಂದ ಕರೆಸಿಕೊಂಡಿದ್ದಳು. ಆತ ಮನೆಗೆ ಬರುವ ಮೊದಲೇ ಜ್ಯೂಸ್ ರೀತಿಯ ಕಷಾಯದಲ್ಲಿ ಕೀಟನಾಶಕ ಬೆರೆಸಿ ಸಿದ್ಧಪಡಿಸಿದ್ದಳು. ನಿಗದಿತ ಪ್ರಮಾಣದಲ್ಲಿ ಕಾಪಿಕ್ ಕೀಟನಾಶಕ ಸೇವಿಸಿದಲ್ಲಿ ಅದರ ವಿಷ 24 ತಾಸುಗಳ ತನಕವೇ ರಕ್ತದಲ್ಲಿ ಉಳಿದುಕೊಳ್ಳುತ್ತದೆ. ನಂತರ ಅದು ಸಹಜವಾಗಿಯೇ ಬದಲಾಗುತ್ತದೆ. ಆದರೆ ಗ್ರೀಷ್ಮಾ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಕೀಟನಾಶಕವನ್ನು ಕಷಾಯದಲ್ಲಿ ಬೆರೆಸಿ ಶಾರೋನ್‌ಗೆ ಕುಡಿಸಿದ್ದಳು. ಅದನ್ನು ಕುಡಿದ ಕೂಡಲೇ ಗಂಭೀರಾವಸ್ಥೆಗೆ ತಲುಪಿದ ಶಾರೋನ್ 2022 ಅಕ್ಟೋಬರ್ 25ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಅಂಶ 24 ತಾಸುಗಳ ಬಳಿಕವೂ ಶಾರೋನ್‌ರ ರಕ್ತದಲ್ಲಿ ಉಳಿದು ಕೊಂಡಿತ್ತು. ಅದು ಆತನ ದೇಹ ದ ಆಂತರಿಕ ಅವಯವಗಳನ್ನೆಲ್ಲ ನಾಶಗೊಳಿ ಸುವಂತೆ ಮಾಡಿತ್ತು. ಅದು ವೈಜ್ಞಾನಿಕ ಪರೀಕ್ಷೆಯಲ್ಲಿ ಸಾಬೀತುಗೊಂ ಡಿದ್ದು, ಅದುವೇ ಈ ಕೊಲೆ ಪ್ರಕರಣವನ್ನು ಸಾಬೀತುಗೊ ಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತೆಂದು ಡಿವೈಎಸ್ಪಿ ಕೆ.ಕೆ. ಜೋನ್ಸನ್ ತಿಳಿಸಿದ್ದಾರೆ. ನೇರವಾಗಿ ಸಾಕ್ಷಿಗಳಿಲ್ಲದ ಈ ಕೊಲೆ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ವೈಜ್ಞಾನಿಕ ಮತ್ತು ಡಿಜಿಟಲ್ ಪುರಾವೆಗಳು ಅತೀ ನಿರ್ಣಾಯಕ ಪಾತ್ರ ವಹಿಸಿತ್ತೆಂದೂ ಅವರು ತಿಳಿಸಿದ್ದಾರೆ.
ಮರಣದಂಡನೆ ಶಿಕ್ಷೆಗೊಳಗಾದ ವಿಷಕನ್ಯೆ ಗ್ರೀಷ್ಮಾಳಿಗೆ ಅದರ ಹೊರತಾಗಿ 17 ವರ್ಷ ಕಠಿಣ ಸಜೆ ಹಾಗೂ ಒಂದೂಕಾಲು ಲಕ್ಷ ರೂ. ಜುಲ್ಮಾನೆಯನ್ನು ನ್ಯಾಯಾಲಯ ವಿಧಿಸಿದೆ. ಇದರ ಹೊರತಾಗಿ ಆಕೆಗೆ ಸಹಾಯವೊದಗಿಸಿದ ಮೂರನೇ ಆರೋಪಿ ಮಾವ ನಿರ್ಮಲ್ ಕುಮಾರ್‌ನಿಗೆ ನ್ಯಾಯಾಲಯ ಮೂರು ವರ್ಷ ಸಜೆ ಹಾಗೂ 50 ಸಾವಿರ ರೂ. ಜುಲ್ಮಾನೆ ವಿಧಿಸಿದೆ.
ಈ ಪ್ರಕರಣದ ಎರಡನೇ ಆರೋಪಿಯಾಗಿರುವ ಗ್ರೀಷ್ಮಾಳ ತಾಯಿ ಸಿಂಧುಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಶಾರೋನ್‌ರಾಜ್ ಗ್ರೀಷ್ಮಾಳನ್ನು ಗಾಢವಾಗಿ ಪ್ರೀತಿಸುತ್ತಿದ್ದನು. ಅವರ ಪ್ರೇಮಕಥೆ ಮುಂದುವರಿಯುತ್ತಿ ದ್ದಂತೆಯೇ ಗ್ರೀಷ್ಮಾಳ ಮನೆಯವರು ಆಕೆಗೆ ಬೇರೊಬ್ಬನೊಂದಿಗೆ ವಿವಾಹ ನಿಶ್ಚಿತಾರ್ಥ ನಡೆಸಿದ್ದರು. ಅದಕ್ಕೆ ಶೆರೋನ್ ಅಡ್ಡಿಯಾಗಬಹುದೆಂದು ಭಾವಿಸಿ ಗ್ರೀಷ್ಮಾ ಆತನನ್ನು ಉಪಾಯದಿಂದ ಮನೆಗೆ ಕರೆಸಿ ಕಷಾಯದಲ್ಲಿ ಕೀಟನಾಶಕ ಬೆರೆಸಿ ಕುಡಿಸಿ ಕೊಲೆಗೈದಿದ್ದಳೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.