ಪ್ಲಸ್ವನ್ಗೆ ಸೀಟು ಲಭಿಸದ ವ್ಯಥೆಯಿಂದ ಊರು ಬಿಟ್ಟ ಬಾಲಕ: ಗಂಟೆಗಳೊಳಗೆ ತಿರೂರಿನಲ್ಲಿ ಪತ್ತೆ
ಕುಂಬಳೆ: ಪ್ಲಸ್ವನ್ಗೆ ಸೀಟು ಲಭಿಸದ ವ್ಯಥೆಯಿಂದ ವಿದ್ಯಾರ್ಥಿಯೋರ್ವ ಊರು ಬಿಟ್ಟಿದ್ದು, ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಂತೆ ಗಂಟೆಗಳೊಳಗೆ ಬಾಲಕನನ್ನು ತಿರೂರಿನಲ್ಲಿ ಪತ್ತೆಹಚ್ಚಲಾಗಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ೧೫ರ ಹರೆಯದ ಬಾಲಕ ನಿನ್ನೆ ಮಧ್ಯಾಹ್ನವೇಳೆ ನಾಪತ್ತೆಯಾಗಿದ್ದನು.
ಈ ಬಗ್ಗೆ ಸಂಬಂಧಿಕರು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದರು. ಅಲ್ಲದೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಿದ್ದರು. ಈ ವೇಳೆ ತಿರೂರು ಪೇಟೆಯಲ್ಲಿ ಅಪರಿಚಿತ ಬಾಲಕ ಪತ್ತೆಯಾದ ಬಗ್ಗೆ ಆಟೋ ಚಾಲಕರು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಪೊಲೀಸರು ಬಾಲಕನನ್ನು ಕಸ್ಟಡಿಗೆ ತೆಗೆದು ವಿಚಾರಿಸಿದಾಗ ಕುಂಬಳೆಯಿಂದ ನಾಪತ್ತೆಯಾದ ಬಾಲಕನೆಂದು ತಿಳಿದುಬಂದಿದೆ. ಈಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಎಸ್ಐ ವಿನೋದ್ ಕುಮಾರ್ ಹಾಗೂ ಸಂಬಂಧಿಕರು ತಿರೂರಿಗೆ ತೆರಳಿ ಬಾಲಕನನ್ನು ಕುಂಬಳೆಗೆ ಕರೆತಂದಿದ್ದಾರೆ. ಬಾಲಕನನ್ನು ವಿಚಾರಿಸಿದಾಗ ಪ್ಲಸ್ವನ್ಗೆ ಸೀಟು ಸಿಗದ ವ್ಯಥೆಯಿಂದ ಊರು ಬಿಟ್ಟಿರುವುದಾಗಿ ತಿಳಿಸಿ ದ್ದಾನೆನ್ನಲಾಗಿದೆ.