ಫ್ಲ್ಯಾಟ್‌ನ ಮಲಿನ ಜಲ ರಸ್ತೆಗೆ: ಜನರ ಸಂಚಾರಕ್ಕೆ ಸಮಸ್ಯೆ
ಉಪ್ಪಳ: ಹಲವು ಫ್ಲ್ಯಾಟ್‌ಗಳ ಮಲಿನ ಜಲ ರಸ್ತೆಗೆ ಬಹಿರಂಗವಾಗಿ ಹರಿಯಬಿಟ್ಟು ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಸೃಷ್ಟಿಸುತ್ತಿರುವುದು ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪತ್ವಾಡಿಯಲ್ಲಿ ಕಂಡು ಬಂದಿದೆ. ಇಲ್ಲಿನ ಮಜಲ್ ರಸ್ತೆಗೆ ಫ್ಲ್ಯಾಟ್‌ನ ಮಲಿನ ಜಲವನ್ನು ಹರಿಯಬಿಡಲಾಗಿದೆ. ದಿನನಿತ್ಯ ವಾಹನ ಸಂಚಾರ ಹಾಗೂ ಜನರು ಸಂಚರಿಸುವ ವ್ಯವಸ್ಥೆಯಲ್ಲಿ ಈಗ ಮೂಗು ಮುಚ್ಚಿ ನಡೆದಾಡಬೇಕಾಗಿದ್ದು, ರೋಗಭೀತಿಯೂ ಉಂಟಾಗಿದೆ. ರಸ್ತೆ ಬದಿಯ ಚರಂಡಿಗೆ ಪೈಪ್ ಮೂಲಕ ಫ್ಲ್ಯಾಟ್‌ನ ಮಲಿನ ಜಲವನ್ನು ಹರಿಯಬಿಡಲಾಗುತ್ತಿದ್ದು, ಚರಂಡಿ ತುಂಬಿ ಅದು ರಸ್ತೆಯಲ್ಲೇ ಹರಿಯುತ್ತಿದೆ. ಈ ಮಲಿನ ಜಲವನ್ನು ತುಳಿದುಕೊಂಡೇ ಸಂಚರಿಸಬೇಕಾಗಿದ್ದು, ಇದು ರೋಗಭೀತಿಗೆ ಕಾರಣವಾಗಿದೆ. ಈ ಬಗ್ಗೆ ಫ್ಲ್ಯಾಟ್ ಮಾಲಕರಲ್ಲಿ ಸ್ಥಳೀಯರು ಸೂಚಿಸಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪಂಚಾಯತ್, ಆರೋಗ್ಯಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಬಂದು ನೋಡಿ ಹಿಂತಿರುಗಿದ್ದಲ್ಲದೆ ಯಾವುದೇ ಕ್ರಮ ಉಂಟಾಗಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಮಲಿನ ಜಲ ಹರಿಯಬಿಡುವುದನ್ನು ನಿಲ್ಲಿಸದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಸ್ಥಳೀಯರು ತಿಳಿಸಿದ್ದಾರೆ.