ಬದಿಯಡ್ಕ ಪೇಟೆಯಲ್ಲಿ ಆಟೋ ನಿಲ್ದಾಣ, ಸಾರ್ವಜನಿಕ ಸಭೆ ನಡೆಯುವ ಸ್ಥಳದಲ್ಲಿ ಬಸ್ ಶೆಲ್ಟರ್ ನಿರ್ಮಾಣ: ಸಿಐಟಿಯು ಕಾರ್ಮಿಕರಿಂದ ತಡೆ
ಬದಿಯಡ್ಕ: ಪೇಟೆಯಲ್ಲಿ ಆಟೋ ನಿಲ್ದಾಣ, ಸಾರ್ವಜನಿಕ ಸಭೆಗಳು ನಡೆಯುವ ಸ್ಥಳವನ್ನು ಇಲ್ಲದಂತೆ ಮಾಡಿ ಬಸ್ ತಂಗುದಾಣ ನಿರ್ಮಿಸುವ ಕ್ರಮವನ್ನು ಸಿಐಟಿಯು ಆಟೋ ಕಾರ್ಮಿಕರು ಹಾಗೂ ಸ್ಥಳೀಯರು ತಡೆದರು. ಪೇಟೆಯ ಅಭಿವೃದ್ಧಿಗೆ ಸಂಬಂಧಿಸಿ ಸರ್ವಪಕ್ಷ ಮುಖಂಡರು, ಸಂಬಂಧಪಟ್ಟ ಅಧಿಕಾರಿಗಳು ಸೇರಿ ಈ ಮೊದಲು ಕುಂಬಳೆ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಬಸ್ ಕಾಯುವಿಕೆಗಾಗಿ ಕೇಂದ್ರ ನಿರ್ಮಿ ಸಲು ಕಂಡುಕೊಂಡ ಸ್ಥಳವನ್ನು ತಿರಸ್ಕರಿಸಿ ಪಂಚಾಯತ್ ಆಡಳಿತ ಸಮಿತಿಯ ಕೆಲವರ ಸ್ವ-ಹಿತಾಸಕ್ತಿ ಕಾರ್ಯಗತಗೊಳಿಸಲು ನಡೆಸಿದ ಯತ್ನ ಪ್ರತಿಭಟನೆಗೆ ಹೇತುವಾಗಿದೆ. ನವೀಕರಿಸಿದ ಕುಂಬಳೆ-ಬದಿಯಡ್ಕ- ಮುಳ್ಳೇರಿಯ ಲೋಕೋಪಯೋಗಿ ರಸ್ತೆ ಕಾಮಗಾರಿಯ ಅಂಗವಾಗಿ ಹೊಸದಾಗಿ ಬಸ್ ಶೆಲ್ಟರ್ ನಿರ್ಮಿಸುತ್ತಿರುವುದು. ಆದರೆ ಇದು ನಿರ್ಮಿಸುತ್ತಿರುವುದು ಪ್ರಯಾಣಿಕರಿಗೆ ಸೂಕ್ತವಾದ ಸ್ಥಳದಲ್ಲಿ ಅಲ್ಲವೆಂಬುದು ಪ್ರತಿಭಟನೆಗೆ ಕಾರಣವಾಗಿದೆ.
ಇತ್ತೀಚೆಗೆ ಪೊಲೀಸರನ್ನು ಉಪ ಯೋಗಿಸಿ ನಿರ್ಮಾಣ ನಡೆಸಲಿರುವ ಯತ್ನ ವಿಫಲವಾಗಿದೆ. ಕಳೆದ ೨೫ ವರ್ಷಕ್ಕೂ ಅಧಿಕವಾಗಿ ಆಟೋ ನಿಲ್ದಾಣವಾಗಿದ್ದ ಈ ಸ್ಥಳವನ್ನು ಇಲ್ಲದಂತೆ ಮಾಡಲು ವ್ಯಾಪಾರಿಗಳು ಕೂಡಾ ಯತ್ನಿಸುತ್ತಿರುವುದಾಗಿ ಸಿಐಟಿಯು ದೂರಿದೆ. ಬಿಎಂಎಸ್ ಕೂಡಾ ನಿರ್ಮಾಣ ವಿರುದ್ಧ ರಂಗಕ್ಕೆ ಇಳಿದಿದೆ. ಇದೇ ವೇಳೆ ನಿರ್ಮಾಣ ತಡೆದವರ ಜೊತೆಯಲ್ಲಿ ಸೂಕ್ತವಾಗಿ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್ ತಿಳಿಸಿದ್ದಾರೆ. ಸಿಐಟಿಯು ಮುಖಂಡರಾದ ಕೆ. ಜಗನ್ನಾಥ ಶೆಟ್ಟಿ, ಚಂದ್ರನ್, ಶ್ರೀಕಾಂತ್, ಹಾರೀಸ್ ಮೊದ ಲಾದವರು ಆಟೋ ಕಾರ್ಮಿಕರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.