ಬದಿಯಡ್ಕ ಪೊಲೀಸ್ ಠಾಣೆ ಜನಶತ್ರು ಠಾಣೆಯಾಗಿ ಬದಲಾಗಿದೆ- ಬಿಜೆಪಿ
ಬದಿಯಡ್ಕ: ಜನರು ತಮ್ಮ ದೂರುಗಳನ್ನು ನೀಡಲು ಯಾವುದೇ ಅಂಜಿಕೆಯಿಲ್ಲದೆ, ಯಾವುದೇ ಸಂಘ ಟನೆಯ ನೇತಾರರ ಸಹಾಯವಿಲ್ಲದೆ ಧೈರ್ಯದಿಂದ ಹೋಗುತ್ತಿದ್ದ ಬದಿಯಡ್ಕದ ಜನಮೈತ್ರಿ ಪೊಲೀಸ್ ಸ್ಟೇಷನ್ ಈಗಿನ ಠಾಣಾಧಿಕಾರಿಯ ಅಹಂಕಾರ ವರ್ತನೆಯಿಂದ ಜನಶತ್ರು ಪೊಲೀಸ್ ಠಾಣೆಯಾಗಿ ಬದಲಾಗಿದೆ ಎಂದು ಬಿಜೆಪಿ ದೂರಿದೆ.
ಇತ್ತೀಚೆಗೆ ನೆಕ್ರಾಜೆ ಸಮೀಪದ ಕೋಳಾರಿಯಿಂದ ನಾಪತ್ತೆಯಾಗಿದ್ದ ಯುವತಿಯ ತಾಯಿ ಅದೇ ದಿನ ಮಧ್ಯಾಹ್ನ ೧ ಗಂಟೆಗೆ ಠಾಣೆಗೆ ತಲುಪಿ ಲಿಖಿತ ದೂರನ್ನು ನೀಡಿದ್ದರು. ಅದನ್ನು ಸ್ವೀಕರಿಸದೆ ಅವರನ್ನು ಸಂಜೆ ೬ ಗಂಟೆಯ ತನಕ ಠಾಣೆಯಲ್ಲಿ ಕುಳ್ಳಿರಿಸಿ ಅವರೊಂದಿಗೆ ಠಾಣೆಗೆ ತಲುಪಿದ ವಿವಿಧ ಸಂಘಟನೆಯ ನೇತಾರರೊಂದಿಗೆ ಅನುಚಿತವಾಗಿ ವರ್ತಿಸಿದ ಠಾಣಾಧಿಕಾರಿಯ ವರ್ತನೆ ಖಂಡನೀಯವಾಗಿದೆ. ಮಾತ್ರವಲ್ಲ ನಾಪತ್ತೆಯಾಗಿದ್ದ ಯುವತಿ ತಂಗಿದ್ದ ಸ್ಥಳದ ಕುರಿತು ಪೂರ್ಣ ಮಾಹಿತಿ ಗೊತ್ತಿದ್ದು, ಪತ್ತೆ ಮಾಡದೆ ಕಾಸರಗೋಡು ಜಿಲ್ಲೆಯಲ್ಲಿ ಮತಾಂತರ ಜಾಲಕ್ಕೆ ಒತ್ತಾಸೆ ನೀಡುವ ಕೆಲಸವನ್ನು ಠಾಣಾಧಿಕಾರಿ ಮಾಡಿರುವುದಾಗಿ ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ ಆರೋಪಿಸಿದ್ದಾರೆ.
ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಇದೇ ರೀತಿಯ ಅಹಂಕಾರದ ವರ್ತನೆ ಮುಂದುವರಿದಲ್ಲಿ ಉಗ್ರ ರೀತಿಯ ಪ್ರತಿಭಟನೆಗೆ ಪಕ್ಷ ಸಿದ್ಧವಾದಿತೆಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಹಿಂದೂ ವಿರೋಧಿ ನೀತಿ ವಿ.ಹಿಂ.ಪ.ದಿಂದ ಬದಿಯಡ್ಕ ಠಾಣೆ ಮಾರ್ಚ್
ಬದಿಯಡ್ಕ: ಬದಿಯಡ್ಕ ಠಾಣೆಯ ಪೊಲೀಸ್ ಅಧಿಕಾರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಪೊಲೀಸ್ ಠಾಣೆ ಮಾರ್ಚ್ ನಡೆಸುವುದಾಗಿ ಪ್ರಖಂಡ ಅಧ್ಯಕ್ಷ ಸುನಿಲ್ ಕಿನ್ನಿಮಾಣಿ ತಿಳಿಸಿದ್ದಾರೆ. ಜೂನ್ ೧ರಂದು ಬೆಳಿಗ್ಗೆ ೧೦ ಗಂಟೆಗೆ ಬದಿಯಡ್ಕ ಗಣೇಶ ಮಂದಿರದಿಂದ ಮಾರ್ಚ್ ಆರಂಭಗೊಳ್ಳಲಿದೆ. ಹಿರಿಯ ಮುಖಂಡರು ಭಾಗವಹಿಸಿ ಮಾತನಾಡುವರೆಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಅಧ್ಯಕ್ಷರು ವಿನಂತಿಸಿದ್ದಾರೆ.