ಬದಿಯಡ್ಕ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಡಿವೈಡರ್ ತೆರವಿಗೆ ಆಗ್ರಹ
ಬದಿಯಡ್ಕ: ಬಸ್ ನಿಲ್ದಾಣದ ಮುಂಭಾಗ ಅಪಾಯ ವಲಯವಾಗಿ ಬದಲಾಗುತ್ತಿದೆ ಎಂದು ಪ್ರೈಡ್ ಬಸ್ ಕಾರ್ಮಿಕರ ಯೂನಿಯನ್ ಅಧ್ಯಕ್ಷ ಹಾರೀಸ್ ಬದಿಯಡ್ಕ ಮುನ್ನೆಚ್ಚರಿಕೆ ನೀಡಿದ್ದಾರೆ. ಕುಂಬಳೆ- ಮುಳ್ಳೇರಿಯ ರಸ್ತೆಯ ಅಭಿವೃದ್ಧಿ ಅಂಗವಾಗಿ ಬಸ್ ನಿಲ್ದಾಣದ ಮುಂಭಾಗದ ಡಿವೈಡರ್ ಮುಚ್ಚಿರುವುದು ಅಪಾಯಕ್ಕೆ ಕಾರಣ ವಾಗಬಹುದೆಂದು ಅವರು ತಿಳಿಸಿದ್ದಾರೆ. ಡಿವೈಡರ್ ಮುಚ್ಚಿದ ಕಾರಣ ಈಗ ಬಸ್ಗಳಿಗೆ ಬಸ್ ನಿಲ್ದಾಣಕ್ಕೆ ತಲುಪ ಬೇಕಿದ್ದರೆ ಪೊಲೀಸ್ ಸ್ಟೇಷನ್ ಇರುವಲಿ ವರೆಗೆ ತೆರಳಿ ಯು ಟರ್ನ್ ತೆಗೆಯ ಬೇಕಾದ ಸ್ಥಿತಿ ಇದೆ. ಈ ಸಂದರ್ಭದಲ್ಲಿ ಎರಡು ಬಾರಿ ರಿವರ್ಸ್ ತೆಗೆಯಬೇಕಾಗಿ ಬರುತ್ತಿದೆ. ಇದರಿಂದ ಕುಂಬಳೆ ಭಾಗಕ್ಕೆ ತೆರಳುವ ಕಾರುಗಳು, ಬೈಕ್ಗಳ ಸಹಿತ ಇತರ ವಾಹನಗಳು ರಿವರ್ಸ್ ತೆಗೆದು ತಿರುಗುವ ಬಸ್ಗಳಿಗೆ ಢಿಕ್ಕಿಯಾಗುವುದು ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಮುಂದುಗಡೆಯಿರುವ ಡಿವೈಡರ್ ತೆರೆದು ನೀಡಿ ಹಿಂದಿನಂತೆಯೇ ಬಸ್ಗಳು ನಿಲ್ದಾಣಕ್ಕೆ ಸಂಚರಿಸಲಿರುವ ಸೌಕರ್ಯವನ್ನು ಏರ್ಪಡಿಸಿದರೆ ಈ ಸಮಸ್ಯೆಗೆ ಪರಿಹಾರವಾಗಬಹುದೆಂದು ಇನ್ಸ್ಪೆಕ್ಟರ್ ಸುಧೀರ್ ಕೆ., ಆರ್ಡಿಎಸ್ ಕಂಪೆನಿ ತಿಳಿಸಿದೆ. ಆದರೆ ಈ ಕ್ರಮವನ್ನು ಕೈಗೊಳ್ಳದಿದ್ದಲ್ಲಿ ರಸ್ತೆ ದಿಗ್ಬಂಧನ ಚಳವಳಿ ಸಹಿತದ ಪ್ರತಿಭಟನೆ ಆರಂಭಿಸುವುದಾಗಿ ಹಾರೀಸ್ ಮುನ್ನೆಚ್ಚರಿಕೆ ನೀಡಿದ್ದಾರೆ.