ಬಾವಿಕ್ಕೆರೆ ಅಣೆಕಟ್ಟಿನಲ್ಲಿ ನೀರಿನ ಹರಿದುಬರುವಿಕೆ ಕುಸಿತ : ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಕ್ಷಾಮ ತಲೆದೋರುವ ಆತಂಕ
ಕಾಸರಗೋಡು: ಕಾಸರಗೋಡು ನಗರಸಭೆ ಮತ್ತು ಪರಿಸರದ ಪಂಚಾಯತ್‌ಗಳ ಸುಮಾರು ಒಂದೂವರೆ ಲಕ್ಷ ಮನೆಗಳಿಗೆ ನಳ್ಳಿ ನೀರು ಪೂರೈಕೆ ಯಾಗುತ್ತಿರುವ ಬಾವಿಕ್ಕೆರೆ ರೆಗ್ಯುಲೇಟರ್ (ಅಣೆಕಟ್ಟು)ನಲ್ಲಿ ನೀರಿನ ಹರಿವು ಕುಸಿಯತೊಡಗಿದೆ.
ಇದು ಬೇಸಿಗೆ ಗಾಲದಲ್ಲಿ ಈ ಪ್ರದೇಶಗಳಲ್ಲಿ ನಳ್ಳಿ ನೀರು ಪೂರೈಕೆ ಸಮಸ್ಯೆ ಸೃಷ್ಟಿಗೆ ದಾರಿ ಮಾಡಿ ಕೊಡಬಹುದೆಂಬ ಆತಂಕವನ್ನೂ ಇನ್ನೊಂದೆಡೆ ಸೃಷ್ಟಿಸತೊಡಗಿದೆ. ಬಾವಿಕ್ಕೆರೆ ನೀರಾವರಿ ಯೋ ಜನೆಗೆ ಉಪ್ಪುನೀರು ಹರಿದು ಬಹುವುದನ್ನು ತಡೆ ಗಟ್ಟಲು ಮೂರು ವರ್ಷಗಳ ಹಿಂದೆ ಇಲ್ಲಿ ರೆಗ್ಯು ಲೇಟರ್- ಕಮ್ ಅಣೆಕಟ್ಟು ನಿರ್ಮಿಸಲಾಗಿತ್ತು. ಪಯಸ್ವಿನಿ- ಕರಿಚ್ಚೇರಿ ಹೊಳೆಗಳ ಸಂಗಮ ಸ್ಥಳದಲ್ಲಿ ೧೨೦.೪ ಮೀಟರ್ ಉದ್ದ ಹಾಗೂ ನಾಲ್ಕು ಮೀಟರ್ ಎತ್ತರದಲ್ಲಿ ೨೫೦ ಕೋಟಿ ಲೀಟರ್ ನೀರು ದಾಸ್ತಾನು ಇರಿಸಲು ಸಾಧ್ಯವಾಗುವ ರೀತಿಯಲ್ಲಿ ೩೫ ಕೋಟಿ ರೂಪಾಯಿ ವ್ಯಯಿಸಿ ಈ ರೆಗ್ಯುಲೇಟರ್ ಕಮ್ ಅಣೆಕಟ್ಟನ್ನು ನಿರ್ಮಿಸಲಾಗಿದೆ.
ಕಾಸರಗೋಡು ನಗರಸಭೆ ಮತ್ತು ಅದರ ಪರಿಸರದ ಪಂಚಾಯತ್‌ಗಳಾದ ಮಧೂರು, ಮುಳಿಯಾರು, ಚೆಂಗಳ, ಮೊಗ್ರಾಲ್‌ಪುತ್ತೂರು ಮತ್ತು ಚೆಮ್ನಾಡ್ ಪಂಚಾಯತ್‌ಗಳಿಗೆ ನಳ್ಳಿ ಮೂಲಕ ಕುಡಿಯುವ ನೀರು ಪೂರೈಕೆ ಹಾಗೂ ಮುಳಿಯಾರು, ಬೇಡಡ್ಕ, ಪಳ್ಳಿಕೆರೆ ಮತ್ತು ಚೆಮ್ನಾಡ್ ಪಂಚಾಯತ್‌ಗಳಿಗೆ ಕೃಷಿ ನೀರಾವರಿ ಸೌಕರ್ಯವನ್ನು ಈ ಅಣೆಕಟ್ಟಿನ ಮೂಲಕ ಏರ್ಪಡಿಸಲಾಗಿದೆ. ಕೇರಳ ಜಲಪ್ರಾಧಿಕಾರ ಮತ್ತು ಜಲ ಸಂಪನ್ಮೂಲ ಇಲಾಖೆ ಆರ್ಥಿಕ ನೆರವಿನೊಂದಿಗೆ ಇದನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟಿಗೆ ನೀರಿನ ಹರಿದು ಬರುವಿಕೆಯಲ್ಲಿ ಈಗ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಅದು ಜಲ ಪ್ರಾಧಿಕಾರದ ಕುಡಿಯುವ ನೀರು ಪೂರೈಕೆ ಮಾತ್ರವಲ್ಲ ಕೃಷಿಗೂ ಮುಂದೆ ಪ್ರತಿಕೂಲಕರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಮಧ್ಯೆ ಉತ್ತಮ ರೀತಿಯಲ್ಲಿ ಬೇಸಿಗೆ ಮಳೆ ಲಭಿಸಿದಲ್ಲಿ ಈ ಸಮಸ್ಯೆಗೆ ಬಹುತೇಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಮಳೆಗಾಲ ಆರಂಭಗೊಳ್ಳುವ ತನಕ ಕಾದು ನಿಲ್ಲಬೇಕಾದ ಸ್ಥಿತಿ ಉಂಟಾಗಲಿದೆ.