ಬಿಎಂಎಸ್ ನೇತಾರನ ಕಳವುಗೈದ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಸುತ್ತಾಟ: ಓರ್ವ ಆರೋಪಿ ಸೆರೆ; ಇನ್ನೋರ್ವನಿಗಾಗಿ ಶೋಧ
ಕಾಸರಗೋಡು: ಬೈಕ್ ಕದ್ದು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ದೃಶ್ಯ ರಸ್ತೆ ಬದಿಯ ಎಐ ಕ್ಯಾಮರಾ ದಲ್ಲಿ ಸೆರೆಯಾಗಿ ಸಿಕ್ಕಿಬಿದ್ದ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಓರ್ವ ನನ್ನು ಹೊಸದುರ್ಗ ಪೊಲೀಸರು ಕಲ್ಲಿಕೋಟೆ ಬಳಿಯಿಂದ ಬಂಧಿಸಿದ್ದಾರೆ.
ಕಲ್ಲಿಕೋಟೆ ಲೋಗಿಕುಳಂಗರ ಕ್ಷೇತ್ರ ಬಳಿಯ ಪುನತ್ತಿಲ್ ಮೀತಲ್ ವೀಟಿಲ್‌ನ ಎ.ಪಿ. ಅಭಿನವ್ (೧೯) ಬಂಧಿತ ಆರೋಪಿ. ಆದರೆ ಕದ್ದ ಬೈಕ್‌ನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಆ ಬೈಕ್‌ನಲ್ಲಿ ತನ್ನ ಜತೆಗಿದ್ದ ಇನ್ನೋರ್ವ ಆರೋಪಿ ಕಲ್ಲಿಕೋಟೆ ಕುರುಚ್ಚುಂಡು ನಿವಾಸಿ ಅಭಿನ್‌ರಾಜ್ ಎಂಬಾತ ಕೊಂಡೊಯ್ದಿರುವುದಾಗಿ ಬಂಧಿತ ಅಭಿನವ್ ಹೇಳಿಕೆ ನೀಡಿದ್ದಾನೆಂದೂ ಅದರ ಆಧಾರದಲ್ಲಿ ಅಭಿನ್‌ರಾಜ್‌ನ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಎಸ್‌ನ ಮಡಿಕೈ ವಲಯ ಸಮಿತಿ ಉಪಾಧ್ಯಕ್ಷ, ಹೊಸದುರ್ಗದಲ್ಲಿ ಬಿಎಂಎಸ್ ತಲೆಹೊರೆ ಕಾರ್ಮಿಕನಾಗಿ ರುವ ಏಚ್ಚಿಕಾನಂ ಚೆಂಬಿಲೋಡ್‌ನ ಕೆ. ಭಾಸ್ಕರನ್ ಎಂಬವರ ಬೈಕ್‌ನ್ನು ಜೂನ್ ೨೭ರಂದು ಹೊಸದುರ್ಗ ನಗರದ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯಿಂದ ಕಳ್ಳರು ಕದ್ದೊಯ್ದಿದ್ದರು. ನಂತರ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವೇಳೆ ಆ ದೃಶ್ಯ ರಸ್ತೆ ಬದಿಯ ಎಐ ಕ್ಯಾಮರಾದಲ್ಲಿ ಮೂಡಿ ಬಂದಿತ್ತು. ಅದರಂತೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ತಪ್ಪಿಗಾಗಿ ವಾಹನ ಇಲಾಖೆ ಬೈಕ್ ಮಾಲಕನಿಗೆ ೯೫೦೦ ರೂ. ಜುಲ್ಮಾನೆ ಪಾವತಿಸುವಂತೆ ನೋಟೀಸು ಜ್ಯಾರಿಗೊಳಿಸಿತ್ತು. ಆ ನೋಟೀಸ್ ಲಭಿಸಿದಾಕ್ಷಣ ಭಾಸ್ಕರನ್ ಅದ ರೊಂದಿಗೆ ನೇರವಾಗಿ ಹೊಸದುರ್ಗ ಪೊಲೀಸ್ ಠಾಣೆಗೆ ಸಾಗಿ ನಡೆದ ವಿಷಯ ತಿಳಿಸಿದರು. ಆಗಲಷ್ಟೇ ಅವರ ಬೈಕ್ ಕದ್ದ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಬೈಕ್ ಕದ್ದ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಅಭಿನವ್ ನನ್ನು ಬಂಧಿಸುವಲ್ಲಿ ಪೊಲೀಸರು ಸಫಲ ರಾದರು. ಇನ್ನೋರ್ವ ಆರೋಪಿಯ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.