ಬಿದ್ದು ಸಿಕ್ಕಿದ ಚಿನ್ನದ ಒಡವೆಗಳನ್ನು ವಾರಿಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಗಾಯಕ
ಕಾಸರಗೋಡು: ಬಿದ್ದು ಸಿಕ್ಕಿದ ಚಿನ್ನದ ಒಡವೆಗಳನ್ನು ಪೊಲೀಸರ ಸಾನ್ನಿಧ್ಯದಲ್ಲಿ ಅದರ ವಾರಿಸುದಾರನಿಗೆ ಹಸ್ತಾಂತರಿಸಿ ಗಾಯಕರೋರ್ವರು ಪ್ರಮಾಣಿಕತೆ ಮೆರೆದಿದ್ದಾರೆ. ಮೂಲತಃ ತಳಂಗರೆ ನಿವಾಸಿ ಹಾಗೂ ಈಗ ಚೆಂಗಳ ನಾಲ್ಕನೇ ಮೈಲಿನಲ್ಲಿ ವಾಸಿಸುತ್ತಿರುವ ಟಿ.ವಿ. ಚಾನೆಲ್ಗಳು ಹಾಗೂ ವಿದೇಶಗಳ ರಸಮಂಜರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖ್ಯಾತಿ ಪಡೆದಿರುವ ಗಾಯಕ ಇಸ್ಮಾಯಿಲ್ ತಳಂಗರೆ ಈ ರೀತಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಇವರಿಗೆ ವಿದ್ಯಾನಗರ ಬಿ.ಸಿ ರೋಡ್ ಅಕ್ಷಯ ಕೇಂದ್ರ ಬಳಿ ಚಿನ್ನದ ಒಡವೆ ಒಳಗೊಂಡ ಪೊಟ್ಟಣ ವೊಂದು ಕಳೆದ ಶುಕ್ರವಾರ ಬಿದ್ದು ಸಿಕ್ಕಿದೆ. ಅವರು ಕೂಡಲೇ ಆ ಚಿನ್ನದೊಂದಿಗೆ ವಿದ್ಯಾನಗರ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಆದರೆ ಚಿನ್ನ ಬಿದ್ದು ಸಿಕ್ಕಿರುವ ಸ್ಥಳ ಕಾಸರಗೋಡು ಪೊಲೀಸ್ ಠಾಣೆಯ ವ್ಯಾಪ್ತಿಗೊಳ ಪಟ್ಟಿದೆ. ಆದ್ದರಿಂದ ಕಾಸರಗೋಡು ಪೊಲೀಸ್ ಠಾಣೆಗೆ ಹೋಗಿ ಚಿನ್ನವನ್ನು ಅಲ್ಲಿ ನೀಡುವಂತೆ ವಿದ್ಯಾನಗರ ಪೊಲೀಸರು ತಿಳಿಸಿದರು. ಅದರಂತೆ ಇಸ್ಮಾಯಿಲ್ ಕಾಸರಗೋಡು ಪೊಲೀಸ್ ಠಾಣೆಗೆ ತೆರಳಿ ಚಿನ್ನವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಾತ್ರವಲ್ಲ ಅವರು ಚಿನ್ನದ ವಾರಿಸುದಾರರನ್ನು ಗುರುತಿಸಲು ಆ ವಿಷಯವನ್ನು ಸೋಶ್ಯಲ್ ಮೀಡಿಯಾದಲ್ಲಿ ಸುದ್ಧಿ ಪ್ರಕಟಿಸಿದರು.
ಆ ಚಿನ್ನ ವಿದ್ಯಾನಗರ ಕೆ.ಸಿ.ಎಂ.ಪಿ ಸೊಸೈಟಿ ಸಿಬ್ಬಂದಿ ಬಾಲಕೃಷ್ಣ ಬಾಡೂರು ಎಂಬವರದಾಗಿತ್ತು. ಅದರಲ್ಲಿ ಮದುವೆ ಉಂಗುರ ಮತ್ತು ಚಿನ್ನದ ಸರವೂ ಒಳಗೊಂಡಿತ್ತು. ಇವರ ಸಂಬಂಧಿಕರೋರ್ವರು ಕಾಸರಗೋಡು ಠಾಣೆಯಲ್ಲಿ ಪೊಲೀಸ್ ಆಗಿದ್ದು, ಅವರು ನೀಡಿದ ಮಾಹಿತಿಯಂತೆ ಕಾಸರಗೋಡು ಪೊಲೀಸರು ಚಿನ್ನದ ವಾರೀಸುದಾರ ಬಾಲಕೃಷ್ಣನ್ರನ್ನು ಪೊಲೀಸ್ ಠಾಣೆಗೆ ಕರೆಸಿ, ಚಿನ್ನವನ್ನು ಇಸ್ಮಾಯಿಲ್ ತಳಂಗರೆ ಅವರು ಎಸ್ಐ ಪಿ.ಅನೂಪ್ರ ಸಾನ್ನಿಧ್ಯದಲ್ಲಿ ಬಾಲಕೃಷ್ಣನ್ರಿಗೆ ಹಸ್ತಾಂತರಿಸಿದರು. ಆ ವೇಳೆ ಬಾಲಕೃಷ್ಣನ್ ಜೊತೆ ಪತ್ನಿ ಮತ್ತು ಮಕ್ಕಳು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಇಸ್ಮಾಯಿಲ್ ಪ್ರಾಮಾಣಿಕತೆ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ.