ಬಿದ್ದು ಸಿಕ್ಕಿದ ಹಣ ಪೊಲೀಸರ ಸಮ್ಮುಖದಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಕಾಸರಗೋಡು: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಆಟೋ ರಿಕ್ಷಾ ಚಾಲಕ ಪೊಲೀಸರ ಸಮ್ಮುಖದಲ್ಲಿ ಅದರ ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಾಸರಗೋಡು ಬಟ್ಟಂಪಾರೆ ನಿವಾಸಿ ಬಿ. ನಾರಾಯಣ ಎಂಬವರು ಪ್ರಾಮಾಣಿಕತೆ ಮೆರೆದ ಆಟೋರಿಕ್ಷಾ ಚಾಲಕನಾಗಿದ್ದಾರೆ. ಇವರಿಗೆ ನಿನ್ನೆ ಬೆಳಿಗ್ಗೆ ಸುಮಾರು ೧೧ ಗಂಟೆ ವೇಳೆಗೆ ನಗರದ ಮಧೂರು-ಕರಂದಕ್ಕಾಡ್ ಜಂಕ್ಷನ್ ಬಳಿ ಹಣ ಬಿದ್ದು ಸಿಕ್ಕಿತ್ತು. ತಡಮಾಡದೆ ಅವರು ನೇರವಾಗಿ ಕಾಸರಗೋಡು ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅದರಲ್ಲಿ ೪೩ ಸಾವಿರ ರೂ. ಒಳಗೊಂಡಿತ್ತು. ಬಳಿಕ ಹಣ ಬಿದ್ದುಸಿಕ್ಕಿದ ಬಗ್ಗೆ ವಾಟ್ಸಪ್ನಲ್ಲೂ ಸಂದೇಶ ರವಾನಿಸಲಾಗಿತ್ತು. ಅದನ್ನು ಕಂಡ ಹಣದ ವಾರೀಸುದಾರ ಅಣಂಗೂರು ಬೆದಿರದ ಶೆರೀಫ್ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಅದು ನನ್ನ ಹಣವೆಂದು ಪುರಾವೆಗಳ ಸಹಿತ ಸಾಬೀತುಪಡಿಸಿದ್ದಾರೆ. ನಂತರ ಆಟೋ ಚಾಲಕ ನಾರಾಯಣರನ್ನು ಪೊಲೀಸರು ನಿನ್ನೆ ಅಪರಾಹ್ನ ೩ ಗಂಟೆಗೆ ಠಾಣೆಗೆ ಕರೆಸಿ ಅವರ ಮೂಲಕವೇ ಹಣವನ್ನು ವಾರೀಸುದಾರರಿಗೆ ಹಸ್ತಾಂತ ರಿಸಿದರು. ಎಎಸ್ಐ ಶಶಿ, ಸ್ಟೇಶನ್ ರೈಟರ್ ಪ್ರದೀಪ್ರ ಸಮ್ಮುಖದಲ್ಲಿ ಹಣವನ್ನು ಹಸ್ತಾಂತರಿಸಲಾಯಿತು. ನಾರಾಯಣರ ಪ್ರಾಮಾಣಿ ಕತೆಯನ್ನು ಪೊಲೀಸರು ಮಾತ್ರವಲ್ಲದೆ ಇತರರಲೂ ಶ್ಲಾಘಿಸಿದ್ದಾರೆ. ನಾರಾಯಣರಿಗೆ ಈ ಹಿಂದೆಯೂ ಇದೇ ರೀತಿ ಹಣ ಬಿದ್ದು ಸಿಕ್ಕಿತ್ತು.
ಅಂದೂ ಅದನ್ನು ಅವರು ಪೊಲೀಸ್ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.