ಬಿರುಸಿನಿಂದ ನಡೆಯುತ್ತಿರುವ ಅಭ್ಯರ್ಥಿಗಳ ಕೊನೆಯ ಹಂತದ ಪ್ರಚಾರ
ಕಾಸರಗೋಡು: ಮತದಾನಕ್ಕಿನ್ನು ನಾಲ್ಕು ದಿನಗಳು ಬಾಕಿ ಇರುವಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಅಂತಿಮ ಹಂತದ ಪ್ರಚಾರದಲ್ಲಿ ತೊಡಗಿದ್ದಾರೆ. ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ನಿನ್ನೆ ತೃಕ್ಕರಿಪುರ ಮಂಡಲದಲ್ಲಿ ಪರ್ಯಟನೆ ನಡೆಸಿದರು. ಕಾಲಿಕ್ಕಡವ್‌ನಿಂದ ಆರಂಭಗೊಂಡ ಪರ್ಯಟನೆ ವಿವಿಧ ಕಡೆಗಳಲ್ಲಿ ಸಾಗಿ ಪೇಕಡತ್ತ್‌ನಲ್ಲಿ ಸಮಾಪ್ತಿಗೊಂಡಿತು. ಮಡಕ್ಕರ ಹಾರ್ಬರ್‌ಗೂ ಭೇಟಿ ನೀಡಿದರು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ನೀಲೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಪಿ. ರಾಜೀವನ್, ಜಿಲ್ಲಾ ಸಮಿತಿ ಸದಸ್ಯ ಎ.ಕೆ. ಚಂದ್ರನ್, ಚೆರ್ವತ್ತೂರು ಪಂಚಾಯತ್ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣನ್, ಪ್ರಧಾನ ಕಾರ್ಯದರ್ಶಿ ಪವಿತ್ರನ್ ಜೊತೆಗಿದ್ದರು.
ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ನಿನ್ನೆ ಬೇಳ ಸೈಂಟ್‌ಮೇರೀಸ್ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಮುಗಿಸಿ ಮರಳುವ ಭಕ್ತರಲ್ಲಿ ಮತ ಯಾಚಿಸಿದರು. ಬಳಿಕ ನಾರಂಪಾಡಿ ಸೈಂಟ್ ಜೋನ್ಸ್ ಬ್ರೆಟ್ಟೋ ಇಗರ್ಜಿಗೂ, ರಿಫಾಯಿಯ ಜುಮ್ಮಾ ಮಸೀದಿ ಸಂದರ್ಶಿಸಿದರು. ಬೇಳ, ಮಂಗಲ್ಪಾಡಿಯ ವಿವಿಧ ಕೇಂದ್ರಗಳಲ್ಲಿ ಪ್ರಚಾರ ನಡೆಸಿದರು.
ಐಕ್ಯರಂಗದ ಮುಖಂಡರಾದ ಶಾಸಕ ಎನ್.ಎ. ನೆಲ್ಲಿಕುನ್ನು, ಶಾಸಕ ಎ.ಕೆ.ಎಂ. ಅಶ್ರಫ್, ಕೆ. ನೀಲಕಂಠನ್, ಸಿ.ಟಿ. ಅಹಮ್ಮದಾಲಿ, ಪಿ.ಎ. ಅಶ್ರಫಲಿ, ಸಿ.ವಿ. ಜೇಮ್ಸ್, ಎಂ.ಪಿ. ಯೂಸಫ್, ಪಿ.ಎ. ಮೂಸ, ಎಂ. ಅಬ್ಬಾಸ್, ಮಾಹಿನ್ ಕೇಲೋಟ್, ಎ. ಗೋವಿಂದನ್ ನಾಯರ್, ಮಂಜುನಾಥ ಆಳ್ವ, ಹರ್ಷಾದ್ ವರ್ಕಾಡಿ ಸಹಿತ ಹಲವರು ವಿವಿಧ ಕೇಂದ್ರಗಳಲ್ಲಿ ಅಭ್ಯರ್ಥಿಯ ಜೊತೆಗಿದ್ದರು. ಇಂದು ಕಾಸರಗೋಡು ವಿಧಾನಸಭಾ ಮಂಡಲದ ವಿವಿಧ ಕಡೆಗಳಲ್ಲಿ ಪರ್ಯಟನೆ ನಡೆಸುವರು.
ಎಡರಂಗದ ಅಭ್ಯರ್ಥಿ ನಿನ್ನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕರ್ನಾಟಕದ ಗಡಿ ಭಾಗವಾಗಿರುವ ಮಲೆನಾಡಿನ ಕಲ್ಲಪ್ಪಳ್ಳಿಯಿಂದ ಆರಂಭಿಸಿ ತೀರ ಪ್ರದೇಶವಾದ ಕೊಳವಯಲ್‌ವರೆಗೆ ಪರ್ಯಟನೆ ನಡೆಸಿದರು. ಬಳಿಕ ಪಾಲಕುನ್ನುನಲ್ಲಿ, ತೃಕ್ಕರಿಪುರದಲ್ಲಿ, ಪಯ್ಯನ್ನೂರಿನಲ್ಲಿ ಮುಖ್ಯಮಂತ್ರಿ ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಕೊಳವಯಲ್‌ನಲ್ಲಿ ಸಮಾರೋಪ ಸಮಾರಂಭವನ್ನು ಎಡರಂಗದ ಸಂಚಾಲಕ ಇ.ಪಿ. ಜಯರಾಜನ್ ಉದ್ಘಾಟಿಸಿದರು. ಚಾಮುಂಡಿಕುನ್‌ನಲ್ಲಿ ಸುಭಾಷ್ ಅರ್ಕರರ ಜಾನಪದ ಹಾಡು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕೇಂದ್ರಗಳಲ್ಲಿ ಮುಖಂಡರಾದ ಶಾಸಕ ಇ. ಚಂದ್ರಶೇಖರನ್, ವಿ.ಕೆ. ರಾಜನ್, ಆರ್. ಶಂಕರ ರೈ, ಎಂ.ವಿ. ಕೃಷ್ಣನ್ ಸಹಿತ ಹಲವರು ಭಾಗವಹಿಸಿದರು. ಇಂದು ಉದುಮ ವಿಧಾನಸಭಾ ಮಂಡಲದಲ್ಲಿ ಪರ್ಯಟನೆ ನಡೆಸುವರು.