ಬಿವರೇಜ್ ಮದ್ಯದಂಗಡಿ ಸಹಿತ ನಗರದ ಹಲವೆಡೆಗಳಲ್ಲಿ ಕಳವಿಗೆತ್ನ
ಕಾಸರಗೋಡು: ಬಿವರೇಜ್ ಕಾರ್ಪೋರೇಶನ್ನ ಮದ್ಯದಂಗಡಿ ಸೇರಿದಂತೆ ನಗರದ ಹಲವು ಅಂಗಡಿಗಳಲ್ಲಿ ರಾತ್ರಿ ಕಳವುಯತ್ನ ನಡೆದಿದೆ. ನಗರದ ಐಸಿ ಭಂಡಾರಿ ರಸ್ತೆ ಬಳಿ ಕಾರ್ಯವೆಸಗುತ್ತಿರುವ ಬಿವರೇಜ್ ಕಾರ್ಪೋರೇಶನ್ನ ಚಿಲ್ಲರೆ ಮದ್ಯದಂಗಡಿಯ ಬೀಗ ಮುರಿದು ರಾತ್ರಿ ಕಳವಿಗೆತ್ನ ನಡೆದಿದೆ. ಈ ಬಗ್ಗೆ ಪ್ರಸ್ತುತ ಮದ್ಯದಂಗಡಿ ಮೆನೇಜರ್ ಜಿಜೇಶ್ ಎನ್.ಕೆ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಮದ್ಯದಂಗಡಿಯ ಮತ್ತು ಪರಿಸರದ ಸಿಸಿ ಟಿವಿ ಗಳನ್ನು ಪೊಲೀಸರು ಪರಿಶೀಲಿಸಿದಾಗ ಮುಖಕ್ಕೆ ಬಟ್ಟೆ ಕಟ್ಟಿ ಬಂದ ಐವರು ಕಳ್ಳರು ಮದ್ಯದಂಗಡಿಯ ಬೀಗ ಒಡೆಯುತ್ತಿರುವ ದೃಶ್ಯ ಅದರಲ್ಲಿ ಪತ್ತೆಯಾಗಿದೆ. ಆ ಪೈಕಿ ಓರ್ವ ಸುಮಾರು ೪೦-೫೦ ವರ್ಷದ ನಡುವಿನ ಪ್ರಾಯದವನಾಗಿದ್ದು, ಕಪ್ಪು ಅಂಗಿ ಮತ್ತು ಬರ್ಮುಡ ಧರಿಸಿದ್ದನು. ಇನ್ನೋರ್ವ ಸುಮಾರು ೩೦ ವರ್ಷ ಪ್ರಾಯದವನಾಗಿದ್ದು, ಆತ ಕಪ್ಪು ಅಂಗಿ ಮತ್ತು ಪ್ಯಾಂಟ್ ಧರಿಸಿದ್ದನು. ಮತ್ತೋನ್ನೋರ್ವ ತಲೆಗೆ ಟೋಪಿ ಧರಿಸಿ ಹೆಗಲಿನಲ್ಲಿ ಬ್ಯಾಗ್ ನೇತಾಡಿಸಿ ಹೊರಗಡೆ ನಿಂತಿರುವ ದೃಶ್ಯ ಪತ್ತೆಯಾಗಿದೆ. ಈತ ಸುಮಾರು ೩೦ ವರ್ಷ ಪ್ರಾಯದವನಾಗಿದ್ದಾನೆ. ಇತರ ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಸಿಸಿ ಟಿವಿ ದೃಶ್ಯದ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಗರದ ತರಕಾರಿ ಅಂಗಡಿ ಸೇರಿದಂತೆ ಇತರ ಹಲವೆಡೆಗಳಲ್ಲೂ ರಾತ್ರಿ ಕಳ್ಳತನ ಯತ್ನ ನಡೆದಿದೆ. ಆದರೆ ಈಬಗ್ಗೆ ಪೊಲೀಸರಿಗೆ ಇನ್ನಷ್ಟೇ ದೂರು ಲಭಿಸಲು ಬಾಕಿಯಿದೆ.