ಬೆಂಗಳೂರು ಬಾಂಬ್ ಸ್ಫೋಟ: ತನಿಖೆಗೆ ಎಂಟು ತಂಡ ರಚನೆ, ನಾಲ್ವರ ವಶ; ತನಿಖೆ ಕೇರಳಕ್ಕೂ ವಿಸ್ತರಣೆ
ಬೆಂಗಳೂರು: ಬೆಂಗಳೂರು ರಾಜಾಜಿನಗರದ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ನಿನ್ನೆ ಮಧ್ಯಾಹ್ನ ೧೨.೫೫ರ ಸುಮಾರಿಗೆ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಯುಎಪಿಎ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸ್ಫೋಟದಲ್ಲಿ ೧೦ ಮಂದಿ ಗಾಯಗೊಂಡಿದ್ದು ಅದರಲ್ಲಿ ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸ್ಪೋಟಕ್ಕೆ ಎರಡು ಟೈಮರ್ಗಳನ್ನು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ತನಿಖೆಗಾಗಿ ಕರ್ನಾಟಕ ಸರಕಾರ ಎಂಟು ತಂಡಗಳನ್ನು ರಚಿಸಿದೆ. ಆರೋಪಿಗಳು ಕೇರಳ, ತಮಿಳುನಾಡು ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅದರಿಂದಾಗಿ ಇದರ ತನಿಖೆಯನ್ನು ಇನ್ನೊಂದೆಡೆ ಕೇರಳಕ್ಕೂ ವಿಸ್ತರಿಸಲಾಗಿದೆ. ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅವರನ್ನು ಅಜ್ಞಾತ ಸ್ಥಳವೊಂದಕ್ಕೆ ಸಾಗಿಸಿ ಅವರನ್ನು ಪೊಲೀಸರು ಮಾತ್ರವಲ್ಲ ಕೇಂದ್ರ ಗುಪ್ತಚರ ವಿಭಾಗಗಳೂ ತೀವ್ರ ವಿಚಾರಣೆಗೊಳಪಡಿಸುತ್ತಿವೆ. ಇದರಲ್ಲಿ ಓರ್ವ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಧರಿಸಿ ನಿನ್ನೆ ಸ್ಫೋಟ ನಡೆದ ಕೆಫೆಗೆ ಬಂದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಕರ್ನಾಟಕ ಪೊಲೀಸರ ಹೊರತಾಗಿ ಎನ್ಎಸ್ಜಿ ತಂಡ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದರ ಹೊರತಾಗಿ ಕೇಂದ್ರ ಗುಪ್ತಚರ ವಿಭಾಗ ಎಫ್ಎಸ್ಎಲ್ ತೋಕೋ ಟೀಮ್, ಬಾಂಬ್ ಸ್ಕ್ವಾಡ್ನಿಂದ ಶೋಧ ನಡೆಸುತ್ತಿದೆ.
ಮಾತ್ರವಲ್ಲ ಐಎಸ್ಟಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೇರಿ ಇತರ ಹಲವು ಕೇಂದ್ರೀಕೃತ ತನಿಖಾ ತಂಡಗಳು ಈ ಬಗ್ಗೆ ಇನ್ನೊಂದೆಡೆ ಸಮಾನಾಂತರ ತನಿಖೆ ಆರಂಭಿಸಿದೆ. ಸ್ಫೋಟ ನಡೆದ ಹೋಟೆಲ್ನಲ್ಲಿ ಓರ್ವ ಶಂಕಿತ ಇಡ್ಲಿ ತಿನ್ನುತ್ತಿರುವ ದೃಶ್ಯವೂ ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಘಟನೆ ನಡೆದ ನಂತರ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ಆರೋಪಿಗಳ ಚಲನವಲನ ದೃಶ್ಯವೂ ಕ್ಯಾಮರಾ ದೃಶ್ಯದಲ್ಲಿ ಪತ್ತೆಯಾಗಿದೆ. ತಲೆಗೆ ಹ್ಯಾಟ್ ಮತ್ತು ಮುಖಕ್ಕೆ ಕನ್ನಡಕ ಧರಿಸಿದ ಸುಮಾರು ೩೦ ವರ್ಷದ ಯುವಕ ಈ ಕೆಫೆಯಲ್ಲಿ ಬಾಂಬ್ ಇರಿಸಿರುವುದಾಗಿ ಪೊಲೀಸರು ಶಂಕಿಸುತ್ತಿದ್ದಾರೆ. ಆತನ ದೃಶ್ಯವೂ ಆ ಪರಿಸರದ ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಆ ದೃಶ್ಯವನ್ನು ಪೊಲೀಸರು ಹೊರಬಿಟ್ಟಿದ್ದಾರೆ.