ಭ್ರಷ್ಟಾಚಾರ: ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಸಮಿತಿ ಬರ್ಖಾಸ್ತು:ಸೊಸೈಟಿಯಲ್ಲಿ ಅಡ್ಮಿನಿಸ್ಟ್ರೇಟಿವ್ ಆಡಳಿತ
ಕುಂಬಳೆ: ಕುಂಬಳೆಯಲ್ಲಿ ಕಾರ್ಯಾಚರಿಸುವ ಮರ್ಚೆಂಟ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಸಮಿತಿಯನ್ನು ಸಹಕಾರಿ ಇಲಾಖೆ ಬರ್ಖಾಸ್ತುಗೊ ಳಿಸಿದೆ. ಸೊಸೈಟಿಯ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ಸಹಕಾರಿ ಇಲಾಖೆ ಯೂನಿಟ್ನ ಇನ್ಸ್ಪೆಕ್ಟರ್ ಬೈಜುರಾಜ್ರನ್ನು ನೇಮಿಸಲಾಗಿದೆ.
೩೦ ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಸೊಸೈಟಿಯಲ್ಲಿ ನಡೆಯುವ ಆರ್ಥಿಕ ಭ್ರಷ್ಟಾಚಾರ, ವಂಚನೆ ವಿರುದ್ಧ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಮರ್ಚೆಂಟ್ಸ್ ವೆಲ್ಫೇರ್ ಸೊಸೈಟಿಯಲ್ಲಿ ಸಹಕಾರಿ ನಿಯಮಗಳನ್ನು ಅವಗಣಿಸಿ ಕಳೆದ ಕೆಲವು ವರ್ಷಗಳಿಂದ ನಡೆದ ವಂಚನೆ ಹಾಗೂ ಭ್ರಷ್ಟಾಚಾರಗಳ ವಿರುದ್ಧ ಸೊಸೈಟಿ ಸದಸ್ಯನಾದ ವಿಕ್ರಂ ಪೈ ಹೈಕೋರ್ಟ್ನ್ನು ಸಮೀಪಿಸಿಗದ್ದರು. ದೂರಿನ ಬಗ್ಗೆ ಹೈಕೋರ್ಟ್ ಕ್ರಮ ಆರಂಭಿಸುವುದರೊಂದಿಗೆ ಸೊಸೈಟಿಯ ಮೂವರು ಸದಸ್ಯರು ರಾಜೀನಾಮೆ ನೀಡಿದ್ದರು. ಒಂಭತ್ತು ಮಂದಿ ಸದಸ್ಯರ ಆಡಳಿತ ಸಮಿತಿಯಿಂದ ದೂರು ಗಾರನಾದ ವಿಕ್ರಂ ಪೈ ಕಳೆದ ವರ್ಷ ಜೂನ್ನಲ್ಲಿ ರಾಜೀನಾಮೆ ನೀಡಿದ್ದರು. ಅನಂತರ ಸರಕಾರಿ ನೌಕರನೂ, ಡೈರೆಕ್ಟರ್ ಆಗಿದ್ದ ಸತೀಶ್ ಕೂಡಾ ರಾಜೀನಾಮೆ ನೀಡಿದರು. ಇದರಿಂದ ಏಳು ಮಂದಿಯ ಆಡಳಿತ ಸಮಿತಿ ಮುಂದುವರಿಯುತ್ತಿತ್ತು. ಸೊಸೈಟಿ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪಗಳ ಕುರಿತು ನ್ಯಾಯಾಲಯ ಕ್ರಮಗಳನ್ನು ಆರಂಭಿಸಿರುವ ಬಗ್ಗೆ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಡೈರೆಕ್ಟರ್ ಗಳಾದ ಬಿ. ಶ್ರೀನಿವಾಸ ನಾಯ್ಕ್, ಕೆ. ಗಿರಿಜ, ಕೆ. ವೀಣಾ ಎಂಬಿವರು ಇತ್ತೀಚೆಗೆ ಡೈರೆಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಸೊಸೈಟಿಯ ೯ ಮಂದಿ ಆಡಳಿತ ಸಮಿತಿಯಲ್ಲಿ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಕುಸಿಯಿತು. ಈ ಹಿನ್ನೆಲೆಯಲ್ಲಿ ಸಹಕಾರಿ ಇಲಾಖೆ ಸೊಸೈಟಿ ಆಡಳಿತ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ. ಇದೇ ವೇಳೆ ವಿವಿಧ ಏಜೆನ್ಸಿಗಳು ಸೊಸೈಟಿ ವಿರುದ್ಧ ತನಿಖೆಗೆ ಕ್ರಮ ಆರಂಭಿಸಿರುವುದಾಗಿ ಸೂಚನೆಯಿದೆ.